ಕಾರ್ಮಿಕ ಇಲಾಖೆ ಸೌಲಭ್ಯಗಳನ್ನು ಪಡೆದುಕೊಳ್ಳಿ

2mnv01
Published on

ಮಾನ್ವಿ: ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಕಾರ್ಮಿಕರು ಈ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಹಂಪಯ್ಯ ನಾಯಕ ಸಲಹೆ ನೀಡಿದರು.

ಪಟ್ಟಣದ ಶಾಸಕರ ಭವನದಲ್ಲಿ ಕಾರ್ಮಿಕ ಇಲಾಖೆಯಿಂದ ಆಯೋಜಿಸಿದ್ದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್ ವಿತರಣೆ ಮಾಡಿ ಸೋಮವಾರ ಮಾತನಾಡಿದರು. ಕಾರ್ಮಿಕ ಇಲಾಖೆ ಅಧಿಕಾರಿಗಳು ಸರ್ಕಾರದ ಸೌಲಭ್ಯಗಳ ಮಾಹಿತಿಯನ್ನು ಕಾರ್ಮಿಕರಿಗೆ ನೀಡಿದಲ್ಲಿ ಮಾತ್ರ ಸೌಲಭ್ಯಗಳು ಅರ್ಹ ಕಾರ್ಮಿಕರಿಗೆ ದೊರೆಯಲು ಸಾಧ್ಯ ಎಂದರು.

ಕಟ್ಟಡ ನಿರ್ಮಾಣದಲ್ಲಿ ಮೇಸ್ತ್ರಿಗಳು, ಟೈಲ್ಸ್ ಹಾಕುವವರು, ಎಲೆಕ್ಟ್ರೀಷಿಯನ್‌ಗಳು, ವೆಲ್ಡರ್‌ಗಳು ಸೇರಿದಂತೆ ಇತರ ಕಾರ್ಮಿಕರಿಗೆ ಕೆಲಸ ಮಾಡುವುದಕ್ಕೆ ಅಗತ್ಯವಿರುವ ಎಲ್ಲ ಕೌಶಲ ಅಧಾರಿತ ಟೂಲ್‌ಕಿಟ್‌ಗಳನ್ನು ಕಾರ್ಮಿಕ ಇಲಾಖೆ ಮೂಲಕ ನೀಡುತ್ತಿದೆ. ಮದುವೆ, ವೈದ್ಯಕೀಯ, ಹೆರಿಗೆ, ಶಿಕ್ಷಣ ಸೌಲಭ್ಯ, ನಿವೃತ್ತಿ ವೇತನ, ದುರ್ಬಲರಿಗೆ ಪಿಂಚಣಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಾರ್ಮಿಕರು ಪಡೆದುಕೊಳ್ಳಬೇಕೆಂದು ಶಾಸಕ ಹಂಪಯ್ಯ ನಾಯಕ ತಿಳಿಸಿದರು.

ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಬಿ.ಆರ್.ಸದಾನಂದ ಮಾತನಾಡಿ, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಇದುವರೆಗೂ ಕಾರ್ಮಿಕ ಇಲಾಖೆಯಿಂದ ವಿದ್ಯಾರ್ಥಿ ವೇತನ ದೊರೆಯದೆ ಇರುವುದರಿಂದ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಕಳೆದ 10 ವರ್ಷಗಳಿಂದ ಮನವಿ ಸಲ್ಲಿಸಿದರು ಕೂಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಯಾವುದೆ ಸೌಲಭ್ಯ ದೊರೆಯುತ್ತಿಲ್ಲ. ಮೃತ ಕಾರ್ಮಿಕರಿಗೆ ಎರಡು ಲಕ್ಷ ರೂ., ಮದುವೆಗೆ ಒಂದು ಲಕ್ಷ ರೂ., ನಿವೇಶನ ಖರೀದಿಗೆ ಎರಡು ಲಕ್ಷ ರೂ., ಮನೆ ಕಟ್ಟುವುದಕ್ಕೆ ಐದು ಲಕ್ಷ ರೂ. ಹಾಗೂ ಇತರ ಸೌಲಭ್ಯ ನೀಡುತ್ತಿಲ್ಲ. ಈ ಸೌಲಭ್ಯ ಕೊಡಿಸಲು ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಮನವಿ ಮಾಡಿದರು.

ತಾಪಂ ಇಒ ಖಾಲೀದ್ ಅಹಮ್ಮದ್, ತಾಲೂಕು ಕಾರ್ಮಿಕ ಇಲಾಖೆಯ ನಿರೀಕ್ಷಕ ಮಲ್ಲಪ್ಪ, ಕಾರ್ಮಿಕ ಅಧಿಕಾರಿ ಶ್ರೀಧರ, ವಿವಿಧ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ, ಪದಾಧಿಕಾರಿಗಳು, ಕಾರ್ಮಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net