ಕಾರ್ಪೋರೇಟರ್‌ಗಳ ತೀರ್ಥಯಾತ್ರೆ!ಅಧ್ಯಯನ ಪ್ರವಾಸ ಹೆಸರಲ್ಲಿ ಉಜ್ಜಯಿನಿ, ಶಿರಡಿ, ಮುಂಬೈ ಭೇಟಿ

Tmk_Palike1 (1)
Published on

ವಿಶೇಷ ವರದಿ ತುಮಕೂರು
ಅಧ್ಯಯನ ಪ್ರವಾಸ ಹೆಸರಲ್ಲಿ ಮಹಾನಗರ ಪಾಲಿಕೆ ಸದಸ್ಯರು ತೀರ್ಥಯಾತ್ರೆಗೆ ತೆರಳಲು ತಯಾರಿ ನಡೆಸಿದ್ದಾರೆ. ಜನವರಿ 20 ರಿಂದ 24ರವರೆಗೆ 5 ದಿನ ಮಧ್ಯಪ್ರದೇಶದ ಇಂಧೋರ್‌ಗೆ ‘ಅಧ್ಯಯನ’ ಪ್ರವಾಸಕ್ಕೆ ಪೌರಾಡಳಿತ ನಿರ್ದೇಶನಾಲಯಕ್ಕೆ ಅನುಮತಿ ಕೋರಲಾಗಿದೆ.
ಇಂದೋರ್ ಅಧ್ಯಯನ ಪ್ರವಾಸ ಅಧಿಕೃತ ಭೇಟಿ ಆದರೂ, ಕಾರ್ಪೋರೇಟರ್‌ಗಳ ಮೊದಲ ಆಯ್ಕೆ ಉಜ್ಜಯಿನಿಯ ಮಹಾಕಾಳೇಶ್ವರ ಕಾರಿಡರ್ ದರ್ಶನವಾಗಿದೆ. ಇದರ ಜತೆಗೆ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದರ್ಶನವು ಪ್ರವಾಸ ಪಟ್ಟಿಯಲ್ಲಿದೆ. ಪ್ರಸಿದ್ಧ ಯಾತ್ರಾಸ್ಥಳವಾದ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ಕಾರಿಡಾರ್ ಅನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದು ಮಹಾಕಾಳೇಶ್ವರ ಕಾರಿಡಾರ್ ಕಣ್ತುಂಬಿಕೊಳ್ಳಲು.
ಪಾಲಿಕೆ ಆಯುಕ್ತರು ಡಿ.15 ರಂದು ಪೌರಾಡಳಿತ ನಿರ್ದೇಶಕರಿಗೆ ಪತ್ರ ಬರೆದು ಸದಸ್ಯರ ಅಧ್ಯಯನ ಪ್ರವಾಸಕ್ಕೆ ಅನುಮತಿ ಕೋರಿದ್ದಾರೆ. ಜ.20 ರಿಂದ 24 ರವರೆಗೆ 35 ಸದಸ್ಯರು, ಐವರು ನಾಮನಿರ್ದೇಶಿತ ಸದಸ್ಯರು ಅಲ್ಲದೆ ಪ್ರವಾಸ ಮಾರ್ಗದರ್ಶಕರಾಗಿ ಐವರು ಅಧಿಕಾರಿ-ಸಿಬ್ಬಂದಿ ತೆರಳಲಿದ್ದಾರೆ.
ಇಂದೋರ್ ಹಾಗೂ ಉಜ್ಜಯಿನಿ ನಗರಗಳಲ್ಲಿ ನೀರು ಸಂಗ್ರಹಣೆ, ಒಳಚರಂಡಿ ವ್ಯವಸ್ಥೆ ಉತ್ತಮವಾಗಿದ್ದು, ಈ ನಿಟ್ಟಿನಲ್ಲಿ ಅನುಮತಿ ಕೋರಿ ಹಾಗೂ ಕೇಂದ್ರ ಸ್ಥಾನ ಬಿಡಲು ಅನುಮತಿ ನೀಡುವಂತೆ ಪತ್ರದಲ್ಲಿ ಕೋರಿದ್ದಾರೆ. ಈ ಯಾತ್ರೆಗೆ ಪಾಲಿಕೆಯಿಂದ ಲಕ್ಷಾಂತರ ರೂಪಾಯಿ ವೆಚ್ಚ ಆಗಲಿದ್ದು ಸರ್ಕಾರದ ಅನುಮತಿ ಅಗತ್ಯವಿದೆ. ಅಧ್ಯಯನ ಪ್ರವಾಸ ನೆಪಮಾತ್ರ. ಮಹಾಕಾಳೇಶ್ವರ ಕಾರಿಡಾರ್, ಶಿರಡಿ ಸಾಯಿಬಾಬಾ ದೇವಸ್ಥಾನ ಭೇಟಿ ಮೂಲ ಉದ್ದೇಶವಾಗಿದೆ. ತೀರ್ಥಯಾತ್ರೆ ಬಳಿಕ ಪ್ರವಾಸ ರಂಗಾಗಲು ವಾಣಿಜ್ಯನಗರಿ ಮುಂಬೈಗೆ ಭೇಟಿ ಕೊಡಬೇಕೆನ್ನುವುದು ಬಹುತೇಕ ಸದಸ್ಯರ ಒತ್ತಾಸೆಯಾಗಿದೆ.

ಪೌರಾಡಳಿತ ಆದೇಶಕ್ಕೆ ಕಿಮ್ಮತ್ತಿಲ್ಲ: ಈ ಹಿಂದೆ 2019ರಲ್ಲಿ ಪೌರಾಡಳಿತ ನಿರ್ದೇಶನಾಲಯ ಆದೇಶ ಧಿಕ್ಕರಿಸಿ ಸದಸ್ಯರು ಅಧ್ಯಯನ ಪ್ರವಾಸದ ಹೆಸರಲ್ಲಿ ಕೈಗೊಂಡಿದ್ದ ಉತ್ತರಭಾರತ ಮೋಜಿನ ಪ್ರವಾಸದಲ್ಲಿ ಕುಟುಂಬದ ಸದಸ್ಯರನ್ನು ಕರೆದುಕೊಂಡು ಹೋಗಿದ್ದರು. ಅಧ್ಯಯನ ಕೈಗೊಂಡಿದ್ದ ದೆಹಲಿ, ಅಮೃತಸರ, ಚಂಡೀಗಢ ನಗರಗಳನ್ನು ಹೊರತುಪಡಿಸಿ ಅನ್ಯ ಸ್ಥಳಗಳಿಗೆ ತೆರಳದಂತೆ ಹಾಗೂ ಕುಟುಂಬ ಸದಸ್ಯರನ್ನು ಕರೆದೊಯ್ಯದಂತೆ ಪೌರಾಡಳಿತ ನಿರ್ದೇಶನಾಲಯ ಷರತ್ತು ವಿಧಿಸಿತ್ತು. ಆದರೆ, ಈ ಷರತ್ತುಗಳನ್ನು ಉಲ್ಲಂಘಿಸಿ ಜೈಪುರ, ಅಜ್ಮೀರ್, ಆಗ್ರಾ, ಮಥುರ, ದೆಹಲಿ, ಅಮೃತಸರ, ವಾಘಾ ಗಡಿಭಾಗ, ಕುರುಕ್ಷೇತ್ರ, ಚಂಡೀಗಢಕ್ಕೆ ಕುಟುಂಬ ಸಮೇತ ಪ್ರವಾಸ ಕೈಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net