ಕಾರ್ಪೊರೇಟ್ ಪರವಿರುವ ಕೇಂದ್ರ ಕಿತ್ತೊಗೆಯೋಣ

Panchayath
Published on

ಚಿತ್ರದುರ್ಗ: ಬಂಡವಾಳಶಾಹಿ, ಕಾರ್ಪೊರೇಟ್ ಸಂಸ್ಥೆಗಳ ಪರವಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಿತ್ತೊಗೆಯಬೇಕು ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ಹೇಳಿದರು.

ರೋಟರಿ ಬಾಲಭವನ ಮುಂಭಾಗ ಬುಧವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ರೈತ ಕಾರ್ಮಿಕ ಪಂಚಾಯತ್‌ನಲ್ಲಿ ಮಾತನಾಡಿದರು.

ದೆಹಲಿಯಲ್ಲಿ ಈ ಹಿಂದೆ 13 ತಿಂಗಳು ನಡೆದ ರೈತರ ಚಳವಳಿ ವೇಳೆ ಪ್ರಧಾನಿ ನರೇಂದ್ರಮೋದಿ ಅವರ ಯಾವ ಭರವಸೆಯೂ ಈಡೇರಿಲ್ಲ. ಮಾನವೀಯತೆ ಇಲ್ಲದ ಕೇಂದ್ರ ಸರ್ಕಾರ ರೈತರು, ಕಾರ್ಮಿಕರು, ಯುವಕರಿಗೆ ವಂಚಿಸಿದೆ ಎಂದು ದೂರಿದರು.

ಜನಸಾಮಾನ್ಯರ ಬದುಕು ಕಸಿದುಕೊಳ್ಳುತ್ತಿರುವ ಬಿಜೆಪಿಯಿಂದ ಭಾರತಕ್ಕೆ ಉಳಿಗಾಲವಿಲ್ಲ. ಹೀಗಾಗಿ ಮಾ. 14ರಂದು ಹೊಸದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆಯುವ ಮಹತ್ವದ ಸಭೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.

ಸಾಮಾಜಿಕ ಪರಿವರ್ತನಾ ಸಂಸ್ಥೆ ಅಧ್ಯಕ್ಷ ಎಸ್.ಆರ್.ಹಿರೇಮಠ್ ಮಾತನಾಡಿ, ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ಅಘೋಷಿತ ತುರ್ತು ಪರಿಸ್ಥಿತಿ ತಲೆದೋರಿದ್ದು, ಹಲವು ಗಂಡಾಂತರ ಎದುರಿಸುವಂತಾಗಿದೆ. ಶ್ರಮಿಕ ವರ್ಗ ನಿತ್ಯ ಪರಿತಪಿಸುತ್ತಿದೆ. ದುಡಿಯುವ ಕೈಗಳಿಗೆ ಕನಿಷ್ಠ ವೇತನ ಸಿಗುತ್ತಿಲ್ಲ ಎಂದು ಬೇಸರಿಸಿದರು.

ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಗೆ 1998ರಲ್ಲಿ ಮಂಜೂರಾತಿ ಸಿಕ್ಕಿದೆ. ಆದರೆ, ಅಂದಿನಿಂದ ಈವರೆಗೂ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದೆ. 4ಸಾವಿರ ಕೋಟಿ ರೂ. ವೆಚ್ಚದ ಯೋಜನೆ ಈಗ 22 ಸಾವಿರ ಕೋಟಿ ರೂ.ಗೆ ತಲುಪಿದೆ. ಕೇಂದ್ರ-ರಾಜ್ಯ ಸರ್ಕಾರ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ. ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷಗಳು ಚಿತ್ರದುರ್ಗ ಜಿಲ್ಲೆಗೆ ಅನ್ಯಾಯವೆಸಗಿವೆ. ಇದಕ್ಕಾಗಿ ಧರಣಿ ಮುಂದುವರೆದಿದ್ದು, ಜಿಲ್ಲೆಯ ಎಲ್ಲ ಶಾಸಕರ ಮನೆಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಕಾರ್ಮಿಕ ಮುಖಂಡ ಅಪ್ಪಣ್ಣ ಮಾತನಾಡಿ, ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಸಾರ್ವಜನಿಕ ಉದ್ದಿಮೆಗಳು ಮಾರಾಟವಾಗುತ್ತಿವೆ. ವಿದ್ಯುತ್ ಖಾಸಗೀಕರಣ ಆಗುತ್ತಿದೆ. ಚಳವಳಿ ನಿರತ ರೈತರನ್ನೂ ತೀವ್ರವಾದಿಗಳಂತೆ ಕಾಣುತ್ತಿದೆ. ರೈತ, ಕಾರ್ಮಿಕರ ಉಳಿವಿಗೆ ಹೋರಾಟ ಅನಿವಾರ್ಯ ಎಂದರು.

ಹೋರಾಟಗಾರ ಯಶವಂತ್ ಮಾತನಾಡಿ, ರೈತರ ಸರ್ವನಾಶಕ್ಕೆ ಕೇಂದ್ರ ಮುಂದಾದಂತಿದೆ. ಪಂಜಾಬ್, ಹರಿಯಾಣ ಭಾಗದವರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೋರಾಡುತ್ತಿರುವುದಕ್ಕೂ ನಮ್ಮ ರಾಜ್ಯದ ಸಮಸ್ಯೆಗಳಿಗೂ ಯಾವ ವ್ಯತ್ಯಾಸಗಳಿಲ್ಲ. 554 ಸಂಘಟನೆಗಳು ಚಳವಳಿಗೆ ಬೆಂಬಲ ಸೂಚಿಸಿವೆ. ಕರ್ನಾಟಕದಿಂದ 1 ಸಾವಿರ ರೈತರು ಹೊರಡಲಿದ್ದೇವೆ ಎಂದು ತಿಳಿಸಿದರು.

ಮುಖಂಡರಾದ ಎಚ್.ಆರ್.ಬಸವರಾಜಪ್ಪ, ಸತ್ಯಪ್ಪ ಮಲ್ಲಾಪುರ, ಮಲಿಯಪ್ಪ, ಸಿ.ಕೆ.ಗೌಸ್‌ಪೀರ್, ಜಿ.ಸಿ.ಸುರೇಶ್‌ಬಾಬು, ವೈ.ಕುಮಾರ್, ತಿಪ್ಪೇಸ್ವಾಮಿ, ಮಂಜುಳಾ ಅಕ್ಕಿ, ಕುಮಾರ್ ಸಮತಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net