ಕಾರ್ಡ್ ಇಲ್ಲದವರಿಗೂ ಇಎಸ್​ಐ ಸೌಲಭ್ಯ

h28-ESIC2
Published on

ಹುಬ್ಬಳ್ಳಿ: ನೌಕರರ ರಾಜ್ಯ ವಿಮಾ ನಿಗಮ(ಇಎಸ್​ಐಸಿ)ದ ಕಾರ್ಡ್ ಹೊಂದಿಲ್ಲದ ಬಡವರಿಗೂ ನಿಗಮದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ನೀಡುವ ಕುರಿತು ಕಾನೂನಿಗೆ ತಿದ್ದುಪಡಿ ತರಲು ಚಿಂತನೆ ನಡೆಸಲಾಗಿದೆ ಎಂದು ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಚರ್ಚೆ ನಡೆಸಲು ಬೆಂಗಳೂರಿನಲ್ಲಿ ಸೆಪ್ಟೆಂಬರ್ 5ರಂದು ಉನ್ನತ ಮಟ್ಟದ ಸಭೆ ಕರೆಯಲಾಗಿದೆ. ಸದ್ಯ ಇಎಸ್​ಐ ಕಾರ್ಡ್ ಹೊಂದಿದವರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರನ್ನು ವಾಪಸ್ ಕಳುಹಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ 7 ಇಎಸ್​ಐ ಆಸ್ಪತ್ರೆಗಳು ಹಾಗೂ 113 ಡಿಸ್ಪೆನ್ಸರಿಗಳಿವೆ. ಇಲ್ಲಿಗೆ ಪ್ರತಿ ವರ್ಷ 450-500 ಕೋಟಿ ರೂ.ಗಳ ಔಷಧಗಳನ್ನು ಕಳುಹಿಸಿಕೊಡುತ್ತೇವೆ. ಆದರೆ, ಕಾಲು ಭಾಗವೂ ಖಾಲಿಯಾಗುವುದಿಲ್ಲ. ಮೂಲಸೌಕರ್ಯ ಹಾಗೂ ಪರಿಣತ ವೈದ್ಯರ ಕೊರತೆಯನ್ನು ಇಎಸ್​ಐ ಆಸ್ಪತ್ರೆಗಳು ಎದುರಿಸುತ್ತಿವೆ. ಈ ಕಾರಣಕ್ಕೆ ಕಾರ್ಡ್ ಹೊಂದಿರುವ ರೋಗಿಗಳನ್ನು ಎಲ್ಲ ಸೌಲಭ್ಯವಿರುವ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಬೇಕಾಗಿದೆ. ಇದರಿಂದ ವೈದ್ಯಕೀಯ ವೆಚ್ಚ ಮರುಪಾವತಿ ರೂಪದಲ್ಲಿ ವರ್ಷಕ್ಕೆ ಸುಮಾರು 42 ಕೋ. ರೂ.ನಷ್ಟು ಸಂದಾಯ ಮಾಡುತ್ತಿದ್ದೇವೆ ಎಂದು ವಿವರಿಸಿದರು.

ನಿಗಮದ ಆಸ್ಪತ್ರೆ ಹಾಗೂ ಡಿಸ್ಪೆನ್ಸರಿಗಳ ಸ್ಥಿತಿಗತಿ ಅರಿಯಲು ಇಲ್ಲಿಯವರೆಗೂ 21 ಜಿಲ್ಲೆಗಳಿಗೆ ಪ್ರವಾಸ ಮಾಡಿದ್ದೇನೆ. ಆಸ್ಪತ್ರೆಗಳಿಗೆ ಅತ್ಯಾಧುನಿಕ ಸೌಲಭ್ಯ ಕಲ್ಪಿಸಿ ಬಡವರಿಗೆ ಹೆಚ್ಚಿನ ಪ್ರಯೋಜನ ಒದಗಿಸುವುದು ನಮ್ಮ ಆದ್ಯತೆ ಎಂದು ಹೇಳಿದರು.

ಪಕ್ಷಕ್ಕೆ ಬದ್ಧರಾಗಬೇಕು: ಯಾರೇ ಆಗಲಿ, ಒಂದು ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾದ ಮೇಲೆ ಆ ಪಕ್ಷದ ತತ್ತ್ವ, ಸಿದ್ಧಾಂತವನ್ನು ಒಪ್ಪಬೇಕಾಗುತ್ತದೆ. ಎಚ್. ವಿಶ್ವನಾಥ ಅವರು ಬಿಜೆಪಿ ಸೇರಿದ ಮೇಲೆ ಬಿಜೆಪಿ ಸಿದ್ಧಾಂತಕ್ಕೆ ಬದ್ಧರಾಗಿರಬೇಕಿತ್ತು. ಟಿಪ್ಪು ಸುಲ್ತಾನ್ ಪರವಾಗಿ ವಿಶ್ವನಾಥ್ ಯಾವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅನವಶ್ಯಕವಾಗಿ ವಿವಾದಾತ್ಮಕ ಹೇಳಿಕೆ ನೀಡುವುದರಿಂದ ಪಕ್ಷಕ್ಕೂ ಹಾಗೂ ಸರ್ಕಾರಕ್ಕೂ ಮುಜುಗರವಾಗುತ್ತದೆ. ಟಿಪ್ಪು ಸುಲ್ತಾನ್ ವಿಚಾರದಲ್ಲಿ ಬಿಜೆಪಿ ನಿಲುವೇ ನನ್ನ ನಿಲುವು ಎಂದು ಸಚಿವ ಶಿವರಾಮ ಹೆಬ್ಬಾರ ಅವರು ಪ್ರಶ್ನೆಗಳಿಗೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net