

ಮೈಸೂರು: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ ಮೂಲಕ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.
ಮೆಟ್ರೋಪೋಲ್ ವೃತ್ತದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆಗೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಇನ್ನಿತರರು ಮಾಲಾರ್ಪಣೆ ಮಾಡಿದರು. ಬಳಿಕ ಬೈಕ್ ರ‌್ಯಾಲಿಗೆ ಚಾಲನೆ ನೀಡಲಾಯಿತು.
ಮಾಜಿ ಸೈನಿಕರು, ಎನ್‌ಸಿಸಿ ಕೆಡೆಟ್, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಮಾಜಿ ಸೈನಿಕರ ಕುಟುಂಬದ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡು ದೇಶ ಪ್ರೇಮ ಮೆರೆದರು.
ಇಲ್ಲಿಂದ ಹೊರಟು ರ‌್ಯಾಲಿ ರೈಲ್ವೆ ನಿಲ್ದಾಣ, ಆಯುರ್ವೇದ ಆಸ್ಪತ್ರೆ, ಸುಭಾಷ್ ಚಂದ್ರ ವೃತ್ತ, ಅಬ್ದುಲ್ ಕಲಾಂ ಆಜಾದ್ ವೃತ್ತ, ಟಿ.ಎಸ್.ನರಸಿಂಹಸ್ವಾಮಿ ವೃತ್ತ, ಬಿಎಂ ರಸ್ತೆ, ಫೌಂಟೇನ್ ವೃತ್ತ, ಡಾ.ಅಂಬೇಡ್ಕರ್ ವೃತ್ತ, ವೆಂಕಟಲಿಂಗಯ್ಯ ವೃತ್ತ, ಥಿಯೋಬಾಲ್ಡ್ ರಸ್ತೆ, ಹುತಾತ್ಮ ಹೇಮಚಂದ್ರ ವೃತ್ತ, ಹಾರ್ಡಿಂಗ್ ವೃತ್ತ, ಬಿ.ಎನ್.ರಸ್ತೆ, ಗನ್‌ಹೌಸ್ ವೃತ್ತ, ಚಾಮರಾಜಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಜೆಎಲ್‌ಬಿ ರಸ್ತೆ, ಮುಡಾ ವೃತ್ತದ ಮೂಲಕ ಸಾಗಿ ಜಗನ್ಮೋಹನ ಅರಮನೆ ಆವರಣ ತಲುಪಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಸೈನಿಕರ ಗೌರವಾರ್ಥವಾಗಿ ಪ್ರತಿ ವರ್ಷದ ಜು.26ರಂದು ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಗುತ್ತಿದೆ.
ದೇಶಕ್ಕಾಗಿ ತಮ್ಮ ಕುಟುಂಬ, ಮನೆ, ಬಂಧು-ಬಳಗ ಸೇರಿದಂತೆ ಎಲ್ಲವನ್ನೂ ಬಿಟ್ಟು ಸೈನಿಕರು ದೇಶಕ್ಕಾಗಿ ಸೇವೆ ಸಲ್ಲಿಸುತ್ತಾರೆ. ಕರ್ತವ್ಯ ನಿಷ್ಠೆ, ತ್ಯಾಗ, ಬಲಿದಾನಗಳ ಮೂಲಕ ಸೈನಿಕರು ಗಡಿಯನ್ನು ಚಳಿ, ಮಳೆ, ಬಿಸಿಲೆನ್ನದೆ ಹಗಲಿರುಳು ದೇಶ ಕಾಯುತ್ತಿದ್ದಾರೆ. ಭಾರತೀಯ ಸೇನೆ ಗಡಿಯಲ್ಲಿ ಕಾಯುತ್ತಿರುವುದರಿಂದ ನಾವಿಂದು ನೆಮ್ಮದಿಯಿಂದ ದೇಶದ ಒಳಗೆ ಬದುಕುತ್ತಿದ್ದೇವೆ ಎಂದರು.
ಮಾಜಿ ಸೈನಿಕರನ್ನು ಸಮಾಜದಲ್ಲಿ ಗೌರವದಿಂದ ಕಾಣಬೇಕು. ಸರ್ಕಾರ ಮಾಜಿ ಸೈನಿಕರ ಹಿತರಕ್ಷಣೆಗಾಗಿ ಸಕಲ ಸೌಲಭ್ಯ ಕಲ್ಪಿಸಬೇಕಾಗಿದೆ. ಅವರು ಸಲ್ಲಿಸಿದ ಸೇವೆಯನ್ನು ನೆನೆಯಬೇಕು. ಆಗ ಮಾತ್ರ ಅವರ ತ್ಯಾಗಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ. ಕಾರ್ಗಿಲ್‌ನಲ್ಲಿ ಹೋರಾಡಿದ ವೀರ ಸೇನಾನಿಗಳಂತೂ ದೇಶದ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ.
ಆ ಮೂಲಕ ಅವರ ಜೀವನ್ಮರಣದ ಹೋರಾಟ ಜೀವಂತವಾಗಿರುತ್ತದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ದೇಶ ಸೇವೆಗಾಗಿ ಸೈನ್ಯ ಸೇರುತ್ತಿದ್ದಂತೆ ಸೈನಿಕರಲ್ಲಿ ದೇಶ ಭಕ್ತಿ ಹೆಚ್ಚಾಗುತ್ತದೆ. ಇದರಿಂದ ಎದುರಾಗುವ ಯಾವುದೇ ಸವಾಲನ್ನು ಲೆಕ್ಕಿಸದೆ ಮುನ್ನುಗ್ಗುತ್ತಾರೆ. ಕಾರ್ಗಿಲ್ ಯುದ್ಧದಲ್ಲಿ ಯೋಧರು ಕಠಿಣ ಸವಾಲು ಎದುರಾಗಿತ್ತು. ಪಾಕಿಸ್ತಾನ ಸೈನಿಕರು ಸುಲಭವಾಗಿ ಮುಂದೆ ಬಂದಿದ್ದರೆ, ದುರ್ಗಮ ಪರ್ವತವನ್ನು ಏರಿ ದಾಳಿ ಮಾಡಬೇಕಾದ ಸವಾಲು ಭಾರತೀಯ ಸೈನ್ಯದ ಮುಂದೆ ಇತ್ತು. ಆದರೂ, ನಮ್ಮ ಸೈನಿಕರು ಕೆಚ್ಚೆದೆಯಿಂದ ಮುನ್ನುಗ್ಗಿ ಯುದ್ಧ ಗೆದ್ದರು ಎಂದು ತಿಳಿಸಿದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ರೋಟರಿ ಕ್ಲಬ್ ಆಫ್ ಹೆರಿಟೇಜ್ ಅಧ್ಯಕ್ಷ ಎಚ್.ಎಫ್.ರಾಜು, ಜಿಲ್ಲಾ ಗವರ್ನರ್ ರಾಮಕೃಷ್ಣ, ಮಾಜಿ ಯೋಧರೂ ಆಗಿರುವ ಹಿರಿಯ ಕೆಎಎಸ್ ಅಧಿಕಾರಿ ಸಿ.ಎಲ್.ಆನಂದ್, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ.ದಿವಾಕರ್, ಎನ್‌ಸಿಸಿ ಗ್ರೂಪ್ ಹೆಡ್ ಕ್ವಾರ್ಟರ್ಸ್ ಕಮಾಂಡೆಂಟ್ ಕರ್ನಲ್ ರೋಹಿತ್ ಠಾಕೂರ್ ಇನ್ನಿತರರಿದ್ದರು.