

ಭದ್ರಾವತಿ: ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಕಾಗದ ಕಾರ್ಖಾನೆಗಳ ಪುನಶ್ಚೇತನಗೊಳಿಸುವಲ್ಲಿ ಕೇಂದ್ರ ಹಾಗೂ ರಾಜ್ಯದ ಆಡಳಿತ ಪಕ್ಷಗಳು ವಿಫಲವಾಗಿವೆ. ಕ್ಷೇತ್ರದ ಜನರಿಗೆ ನೀಡಿರುವ ಭರವಸೆಯಂತೆ ನಡೆದು ಪುನಶ್ಚೇತನಗೊಳಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್.ಗೌಡ ಆಗ್ರಹಿಸಿದರು.
ಕೇಂದ್ರದಲ್ಲಿ ಅಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನಗೊಳಿಸುವ ಕಾರ್ಯದಲ್ಲಿ ಯಶಸ್ಸು ಕಂಡಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹಲವು ಬಾರಿ ಕಾರ್ಖಾನೆ ಪುನಶ್ಚೇತನಗೊಳಿಸುವುದಾಗಿ ಭರವಸೆ ನೀಡಿ ಮತ ಗಳಿಸಿಕೊಂಡ ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಸರ್ಕಾರದ ಗಮನ ಸೆಳೆದು ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದರು.
ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು 15 ಸಾವಿರ ಕೋಟಿ ರೂ. ಬಂಡವಾಳ ತೊಡಗಿಸುವುದಾಗಿ ಭರವಸೆ ನೀಡಿದ್ದರು. ಈ ಕಾರ್ಯದಲ್ಲಿ ಈವರೆಗೂ ಕುಮಾರಸ್ವಾಮಿ ಅವರು ಯಾವುದೇ ಬೆಳವಣಿಗೆ ಕಂಡಿಲ್ಲ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಚುನಾವಣೆ ಸಂದರ್ಭದಲ್ಲಿ ಹಲವು ಬಾರಿ ಮೈಸೂರು ಕಾಗದ ಕಾರ್ಖಾನೆ ಪುನಶ್ಚೇತನಗೊಳಿಸುವುದಾಗಿ ಭರವಸೆ ನೀಡಿದ್ದರು. 4 ಬಾರಿ ಕ್ಷೇತ್ರದ ಶಾಸಕರಾಗಿರುವ ಬಿ.ಕೆ.ಸಂಗಮೇಶ್ವರ್ ಅವರಿಗೆ ಮತ ನೀಡಿದ್ದಲ್ಲಿ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಈವರೆಗೂ ಎಂಪಿಎಂ ಕಾರ್ಖಾನೆ ಸಹ ಪುನಶ್ಚೇತನಗೊಂಡಿಲ್ಲ. ಸಂಗಮೇಶ್ವರ್ ಅವರಿಗೆ ಸಚಿವ ಸ್ಥಾನ ಸಹ ಲಭಿಸಿಲ್ಲ ಎಂದರು.
ಕ್ಷೇತ್ರದ ಜನರಿಗೆ ನೀಡಿರುವ ಭರವಸೆಯಂತೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಇಬ್ಬರು ಸಹ ನಡೆದುಕೊಳ್ಳಬೇಕು. ಪ್ರಸ್ತುತ ರಾಜ್ಯ ಸರ್ಕಾರದ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ಬದಲಾವಣೆ ಕುರಿತು ಚರ್ಚೆಯಾಗುತ್ತಿದ್ದು, ಸಂಗಮೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಕರುನಾಡ ಹಿತ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ವೈ.ಶಶಿಕುಮಾರ್, ವಿವಿಧ ಸಂಘಟನೆ ಮುಖಂಡರಾದ ವೆಂಕಟೇಶ್, ವಿಜಯ ಕುಮಾರ್, ಪರಮೇಶ್ವರ್, ಇಂದ್ರಮ್ಮ, ಮಹಾದೇವಿ, ದಿವ್ಯಾಶ್ರೀ, ಜಟ್ಟೋಜಿರಾವ್, ಶಿವಶಂಕರ್ ಇತರರಿದ್ದರು.