

ಶ್ರೀರಂಗಪಟ್ಟಣ: ತಾಲೂಕಿನ ನಿಷೇಧಿತ ಪ್ರಕೃತಿ ತಾಣಕ್ಕೆ ಇತ್ತೀಚೆಗೆ ತೆರಳಿದ್ದವರು ಹಾಗೂ ಸ್ಥಳೀಯ ಯುವಕರ ನಡುವೆ ಗಲಾಟೆ ನಡೆದು, ಪ್ರವಾಸಿಗರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಸ್ಥಳೀಯರನ್ನು ಬಂಧಿಸಿದ ಪೊಲೀಸರ ನಡೆ ಖಂಡಿಸಿ ಕಾರೇಕುರ ಗ್ರಾಮಸ್ಥರು ಪ್ರತಿಭಟಿಸಿದರು.
ಪಟ್ಟಣದ ಪೊಲೀಸ್ ಠಾಣೆ ಹಾಗೂ ತಾಲೂಕು ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿದ ಕಾರೇಕುರ ಗ್ರಾಮಸ್ಥರು ಹಾಗೂ ಹಿಂದುಪರ ಸಂಘಟನೆಗಳು ಪೊಲೀಸರು ಮತ್ತು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಡಿವೈಎಸ್ಪಿ ಎಚ್.ಎಸ್.ಮುರಳಿ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಆಗಮಿಸಿ ಸಮಸ್ಯೆ ಆಲಿಸಿದರು. ಈ ವೇಳೆ ಕಾರೇಕುರ ಗ್ರಾಮದ ಮಹಿಳೆಯರು ಮಾತನಾಡಿ, ಕಾರೇಕುರ ಹೊರವಲಯದಲ್ಲಿರುವ ಪ್ರಕೃತಿ ತಾಣದಲ್ಲಿ ಯುವಕರು, ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅಲ್ಲದೇ, ಕೃಷಿ ಭೂಮಿಗಳಲ್ಲಿ ಹೊರಗಿನ ಜನರು ಬಂದು ಕುಡಿದು ಮದ್ಯದ ಬಾಟಲಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಜಮೀನುಗಳಿಗೆ ಎಸೆದು ಮಲಿನಗೊಳಿಸಿದ್ದಾರೆ. ನದಿಯಲ್ಲಿ ಬಟ್ಟೆ ತೊಳೆಯಲು ಹೋದ ಗ್ರಾಮದ ಮಹಿಳೆಯರ ಕಾಲಿಗೆ ಒಡೆದ ಮದ್ಯ ಬಾಟಲಿಗಳ ಗಾಜು ಚುಚ್ಚಿಕೊಳ್ಳುವುದು ಮಾತ್ರವಲ್ಲದೆ, ಮದ್ಯದ ನಶೆಯಲ್ಲಿರುವವರು ಸ್ಥಳೀಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ. ಹೀಗಾಗಿ ತಾಲೂಕು ಆಡಳಿತ ಪ್ರವಾಸಿ ತಾಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಮೈಸೂರಿನಿಂದ 2 ಕಾರುಗಳಲ್ಲಿ ನಿರ್ಬಂಧಿತ ನದಿಯ ತಟಕ್ಕೆ ವಿಹಾರಕ್ಕೆ ಬಂದಿದ್ದವರು ತೊಂದರೆ ನೀಡುತ್ತಿದ್ದರಿಂದ ಪ್ರಶ್ನಿಸಿದ ಸ್ಥಳೀಯ ಯುವಕರೊಂದಿಗೆ ಜಗಳ ತೆಗೆದು ಮಾರಾಕಾಸ್ತ್ರಗಳನ್ನು ತೋರಿದ್ದಾರೆ. ಇದಾದ ಬಳಿಕ ಶ್ರೀರಂಗಪಟ್ಟಣಕ್ಕೆ ತೆರಳಿ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ನೀಡಿದ್ದು, ಪೊಲೀಸರು ಸ್ಥಳೀಯರನ್ನು ಮಾತ್ರ ಬಂಧಿಸಿದ್ದಾರೆ. ಸ್ಥಳೀಯರ ಮೇಲೆ ಜಗಳ ತೆಗೆದು ಹಲ್ಲೆ ಮಾಡಿರುವವರನ್ನೂ ಬಂಧಿಸಿ ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರ ಮನವಿ ಆಲಿಸಿದ ಡಿವೈಎಸ್ಪಿ ಮುರುಳಿ, ನಿರಪರಾಧಿಗಳನ್ನು ಬಿಡುಗಡೆಗೊಳಿಸುವ ಜತೆಗೆ ತಪ್ಪು ಎಸಗಿರುವವರ ವಿರುದ್ಧ ಕ್ರಮ ಕೈಗೊಂಡು ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ನಿಷೇಧಿತ ಸ್ಥಳದಲ್ಲಿ ತಕ್ಷಣದಿಂದಲೇ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಭರವಸೆ ನೀಡಿ ಪ್ರತಿಭಟನಾಕಾರರ ಮನವೊಲಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.