ಕಾರೆಕಾಡ್ ಗಿರಿಜನ ಕಾಲನಿಗೆ ಬೆಳಕಿನ ಭಾಗ್ಯ

23 gkp 02..
Published on

ಗೋಣಿಕೊಪ್ಪ: ಬಿಲ್ ಪಾವತಿಸಲಾಗದೆ ಕಗ್ಗತ್ತಲಲ್ಲಿದ್ದ ಅರ‌್ವತೊಕ್ಲು ಗ್ರಾಮದ ಕಾರೆಕಾಡ್ ಗಿರಿಜನ ಕಾಲನಿಗೆ ‘ವಿಜಯವಾಣಿ’ ವರದಿಯು ಬೆಳಕಿನ ಭಾಗ್ಯ ತಂದುಕೊಟ್ಟಿದೆ.


ಬಿಲ್ ಪಾವತಿಸಲಾಗದೆ ವಿದ್ಯುತ್ ಸಂಪರ್ಕ ಕಳೆದುಕೊಂಡಿರುವ ಬಗ್ಗೆ ‘ವಿಜಯವಾಣಿ’ ಪತ್ರಿಕೆಯಲ್ಲಿ ಫೆ.16 ರಂದು ‘ಕಗ್ಗತ್ತಲಲ್ಲಿರುವ ಕಾರೆಕಾಡ್ ಗಿರಿಜನ ಕಾಲನಿ’ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು.

ಕಾಲನಿಯಲ್ಲಿ 3 ಮನೆಗಳಿಂದ ಸುಮಾರು 12 ಸಾವಿರ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದ ಕಾರಣ 2 ತಿಂಗಳಿಂದ ವಿದ್ಯುತ್ ಕಡಿತಗೊಳಿಸಿರುವ ಬಗ್ಗೆ ವರದಿಯಲ್ಲಿ ಬೆಳಕು ಚೆಲ್ಲಲಾಗಿತ್ತು. ಕೆಟ್ಟಿರುವ ಸೋಲಾರ್ ದೀಪ ಹಾಗೂ ಬೀದಿ ದೀಪ ಕಡಿತಗೊಳಿಸಿರುವ ಬಗ್ಗೆ ಸ್ಥಳೀಯರು ನೋವು ಹಂಚಿಕೊಂಡಿದ್ದರು. ನಿತ್ಯ ಕಾಡಾನೆ ಉಪಟಳದಿಂದ ಜೀವ ಭಯವಿದ್ದು, ಹೊಣೆಗಾರಿಕೆ ಬಗ್ಗೆ ಆಡಳಿತ ವರ್ಗಕ್ಕೆ ತಿಳಿಸುವ ಕಾರ್ಯ ನಡೆದಿತ್ತು.


ಇದೀಗ ವರದಿ ಬೆನ್ನಲ್ಲೆ ಗ್ರಾಮ ಪಂಚಾಯಿತಿ ಸದಸ್ಯ ಅಜ್ಜಿಕುಟ್ಟೀರ ಸಜನ್ ಚಂಗಪ್ಪ ಬಿಲ್ ಪಾವತಿ ಮಾಡುವ ಮೂಲಕ ಕಾಲನಿಯಲ್ಲಿ ಮತ್ತೆ ಬೆಳಕು ಹರಿಯುವಂತೆ ಮಾಡಿದ್ದಾರೆ. ಗಿರಿಜನ ದಾಖಲಾತಿಯನ್ನು ಸೆಸ್ಕ್ ಇಲಾಖೆಗೆ ಒದಗಿಸುವ ಮೂಲಕ ಶಾಶ್ವತವಾಗಿ ಉಚಿತ ವಿದ್ಯುತ್ ನೀಡಲು ಅರ‌್ವತೊಕ್ಲು ಗ್ರಾಮ ಪಂಚಾಯಿತಿ ಯೋಜನೆ ರೂಪಿಸಿಕೊಂಡಿದೆ.


ಈ ಬಗ್ಗೆ ಅರ‌್ವತೊಕ್ಲು ಗ್ರಾಮ ಪಂಚಾಯಿತಿ ಪಿಡಿಒ ಶಂಕರನಾರಾಯಣ ಮಾಹಿತಿ ನೀಡಿ, ನಿವಾಸಿಗಳ ಗಿರಿಜನ ದಾಖಲಾತಿ ಪಡೆದುಕೊಂಡು ಸರ್ಕಾರದಿಂದ ಉಚಿತ ವಿದ್ಯುತ್ ಯೋಜನೆ ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸ್ಥಳೀಯರ ಪ್ರೋತ್ಸಾಹ ಕೂಡ ಅಗತ್ಯ. ಪಂಚಾಯಿತಿ ಕೂಡ ಈ ಬಗ್ಗೆ ಮುತುವರ್ಜಿ ವಹಿಸಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net