ಕಾರುಗಳ ಮುಖಾಮುಖಿ ಡಿಕ್ಕಿಯಾಗಿ ಪತಿ ಸಾವು, ಪತ್ನಿಗೆ ಗಾಯ

accident-15
Published on

ಹಾಸನ :ದಂಪತಿಗಳಿಬ್ಬರು ಕಾರಿನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಹಾಸನದ ಕಂದಲಿ ಗ್ರಾಮದ ಕೃಷಿ ಇಲಾಖೆಯ ಸಮೀಪ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಪತಿ ಮೃತಪಟ್ಟು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರು ನಗರದ ದೊಡ್ಡಬೊಮ್ಮಸಂದ್ರ ನಿವಾಸಿ ವೈ. ಶ್ರೀಧರಾಚಾರ್ಯ (63) ಮೃತ ವ್ಯಕ್ತಿ. ಇವರ ಪತ್ನಿ ಶುಭಾ (50) ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಅ.3ರಂದು ಮಂಗಳೂರಿನಲ್ಲಿ ಅವರ ಸಂಬಂಧಿಕರು ಮೃತಪಟ್ಟ ಕಾರಣ ದಂಪತಿ ತಮ್ಮ ಕಾರಿನಲ್ಲಿ ಮಂಗಳೂರಿಗೆ ತೆರಳಿದ್ದರು. ಅ.4ರಂದು ಮಂಗಳೂರಿನಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದರು. ಬೆಳಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ಹಾಸನದ ಕೃಷಿ ಇಲಾಖೆಯ ಸಮೀಪ ಹಾದು ಹೋಗಿರುವ ಎನ್‌ಎಚ್ 75 ಬಿ.ಎಂ ರಸ್ತೆಯ ಎಡಭಾಗದಲ್ಲಿ ಹೋಗುತ್ತಿದ್ದರು. ಈ ವೇಳೆ ಎದುರುಗಡೆಯಿಂದ ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದ ಚಾಲಕ ಇವರ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಶ್ರೀಧರಾಚಾರ್ಯ ಅವರ ತಲೆಗೆ ಹಾಗೂ ಶೋಭಾ ಅವರಿಗೆ ಗಂಭೀರ ಪೆಟ್ಟಾಗಿದೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಹಾಸನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವೈ.ಶ್ರೀಧರಾಚಾರ್ಯ ಅವರು ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಶೋಭಾ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತ ಮಾಡಿದ ಕಾರಿನ ಚಾಲಕನ ವಿರುದ್ಧ ಕಾನೂನುಕ್ರಮ ಜರುಗಿಸಬೇಕೆಂದು ಮೃತರ ಮಗ ಸುದರ್ಶನ್ ಎಸ್.ಆಚಾರ್ಯ ಅವರು ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net