

ಹಿರೇಬಾಗೇವಾಡಿ: ಸಮೀಪದ ಕಮಕಾರಟ್ಟಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ಕಾರೊಂದು ಅಪಘಾತಕ್ಕೀಡಾಗಿ ಮಹಿಳೆ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಹುಬ್ಬಳ್ಳಿ ತಾಲೂಕಿನ ಬೈರಿದೇವರಕೊಪ್ಪ ಗ್ರಾಮದ ನಿವಾಸಿ ವಾಣಿಶ್ರೀ ಬಸವರಾಜ ನಾಗಶೆಟ್ಟಿ (34) ಮೃತಪಟ್ಟವರು. ಅವರ ಪತಿ ಬಸವರಾಜ ನಾಗಶೆಟ್ಟಿ (44) ಹಾಗೂ ಕಾರು ಚಾಲಕ ಸಂಜೀವ ಗಾಯಕವಾಡ (33) ಗಾಯಗೊಂಡವರು. ಮೂಲತಃ ಧಾರವಾಡ ಜಿಲ್ಲೆಯವರಾದ ಇವರು ಹುಕ್ಕೇರಿಯಿಂದ ತಮ್ಮ ಗ್ರಾಮಕ್ಕೆ ಹೋಗುತ್ತಿರುವಾಗ ಕಮಕಾರಟ್ಟಿ ಹತ್ತಿರ ಕಾರು ಚಾಲಕ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಸಿಮೆಂಟ್ ಕಟ್ಟೆಗೆ ಡಿಕ್ಕಿ ಹೊಡೆದು ಹೆದ್ದಾರಿ ಪಕ್ಕದ ಕಾಲುವೆಗೆ ಮಗುಚಿ ಬಿದ್ದಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.