

ಮೈಸೂರು: ಮೈಸೂರು ತಾಲೂಕಿನ ಜಯಪುರ ಹೋಬಳಿಯ ಗುಜ್ಜೇಗೌಡನಪುರ ಗ್ರಾಮದಲ್ಲಿ ಕೇರಳ ಅಡಕೆ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ ಡಕಾಯಿತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಆರೋಪಿಗಳು ಡಕಾಯಿತಿಗೆ ಬಳಸಿದ ಇನ್ನೋವಾ ಕಾರನ್ನು ಕೊಡಿಸಿದ್ದ ಪ್ರಮೋದ್ ಎಂಬ ವ್ಯಕ್ತಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ. ಆರೋಪಿಗಳು ಆತನಲ್ಲಿ ಮದುವೆ ಕಾರ್ಯಕ್ರಮಕ್ಕೆ ಉಪಯೋಗಿಸಲು ಕಾರನ್ನು ಬಾಡಿಗೆಗೆ ಕೇಳಿದ್ದರು.
ಆತ ಕಣ್ಣನ್ ಮೂಲಕ ಕಾರು ಕೊಡಿಸಿದ್ದ. ಕಣ್ಣನ್‌ನನ್ನು ಬುಧವಾರ ಬಂಧಿಸಲಾಗಿತ್ತು. 6ರಿಂದ 7 ಜನ ಆರೋಪಿಗಳು ಕಾರನ್ನು ತಡೆದಿರುವುದಾಗಿ ಗುರುತಿಸಿದ್ದು, ಅವರ ಪತ್ತೆಗಾಗಿ ಕೇರಳದಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜ.20ರಂದು ಕಾರನ್ನು ಅಡ್ಡಗಟ್ಟಿದ ಮುಸುಕುಧಾರಿಗಳ ತಂಡ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿ ಕಾರಿನೊಂದಿಗೆ 1.5 ಲಕ್ಷ ರೂ. ಕಸಿದುಕೊಂಡು ಪರಾರಿಯಾಗಿತ್ತು.
ಕೇರಳದ ಸುಲ್ತಾನ್ ಬತ್ತೇರಿಯ ವ್ಯಾಪಾರಿ ಮಹಮ್ಮದ್ ಮತ್ತು ಕಾರು ಚಾಲಕ ಸೂಫಿ ಹಲ್ಲೆಗೊಳಗಾಗಿದ್ದರು. ಈ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.