ಕಾರಿಮನಿ ಮಲ್ಲಯ್ಯ ಜಾತ್ರೋತ್ಸವ ಸಂಪನ್ನ

web4
Published on

ಮುರಗೋಡ: ಶ್ರಾವಣ ಮಾಸ ಕೊನೆ ಭಾನುವಾರದಂದು ಸಮೀಪದ ಕಾರಿಮನಿ ಮಲ್ಲಯ್ಯ ದೇವಸ್ಥಾನದ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಮಧ್ಯೆ ಸಂಪನ್ನಗೊಂಡಿತು.

ಬೆಳಗ್ಗೆ ದೇವರ ಮೂರ್ತಿಗೆ ಮಹಾರುದ್ರಾಭಿಷೇಕ, ಬಗೆಬಗೆಯ ಹೂಗಳು, ಎಲೆಗಳಿಂದ ಮಲ್ಲಯ್ಯ ಸ್ವಾಮಿ ಗದ್ದುಗೆಯನ್ನು ಸಿಂಗರಿಸಲಾಗಿತ್ತು. ವಿದ್ಯುತ್ ದೀಪಾಲಂಕಾರ, ಬಾಳೆ ಗಿಡ, ಕಬ್ಬು, ಮಾವಿನ ತೋರಣಗಳಿಂದ ದೇವಸ್ಥಾನ ಕಂಗೊಳಿಸುತ್ತಿತ್ತು. ರಾಜ್ಯ, ಹೊರ ರಾಜ್ಯಗಳ ಸಾವಿರಾರು ಭಕ್ತರು ಮಲ್ಲಯ್ಯಸ್ವಾಮಿ ದರ್ಶನ ಪಡೆದರು. ಹರಕೆ ತೀರಿಸಿದರು. ಏಳು ಕೋಟಿ, ಏಳುಕೋಟಿ ಚಾಂಗ್ ಭಲೋ.. ಎನ್ನುತ್ತ ಪಲ್ಲಕ್ಕಿ, ಜತೆಗೆ ನಂದಿಕೋಲು ಹಿಡಿದು ದೇವಸ್ಥಾನ ಪ್ರದಕ್ಷಿಣೆ ಹಾಕಿದರು.

ಪ್ರತೀತಿಯಂತೆ ದೇವಸ್ಥಾನದ ಧರ್ಮದರ್ಶಿಗಳ ಕುಟುಂಬ ಸದಸ್ಯರಾದ ಕಾರ್ತಿಕ ಪಾಟೀಲ, ನವೀನ ಪಾಟೀಲ ಕುಟುಂಬಸ್ಥರು ದೇವಸ್ಥಾನಕ್ಕೆ ಬಂದು ನೈವೇದ್ಯ ಅರ್ಪಿಸಿದ ಬಳಿಕ ದೇವಸ್ಥಾನ ಆವರಣದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ಪೂಜೇರಿ ಕುಟುಂಬಸ್ಥರು ಮಲ್ಲಯ್ಯನಿಗೆ ಪೂಜೆ ಸಲ್ಲಿಸಿದರು. ಬಳಿಕ ಭಕ್ತರು ವಗ್ಗಯ್ಯರಿಗೆ ಡೋಲಿ ತುಂಬಿಸಿ, ಮಹಾಪ್ರಸಾದ ನೆರವೇರಿತು. ಬಳಿಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net