

ಆಲೂರು: ತಾಲೂಕಿನ ಮಗ್ಗೆ ಗ್ರಾಮದ ಬಳಿ ಕರ್ತವ್ಯದಲ್ಲಿದ್ದ ಪೊಲೀಸರೊಬ್ಬರು ರಾತ್ರಿ ಪಾಳಿ ಮುಗಿಸಿ ಠಾಣೆಗೆ ಕಾರಿನಲ್ಲಿ ವಾಪಸಾಗುವ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಕಾಡಾನೆ ಕಾರಿನ ಮೇಲೆ ದಾಳಿ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೆ.ಹೊಸಕೋಟೆ ಹೊರ ಪೊಲೀಸ್ ಠಾಣೆಯಲ್ಲಿರುವ ಪೇದೆ ಹರೀಶ್ ಅವರು ಸೋಮವಾರ ಮಗ್ಗೆ ಗ್ರಾಮದ ವ್ಯಾಪ್ತಿಯಲ್ಲಿ ರಾತ್ರಿ ಪಾಳಿ ಕರ್ತವ್ಯಕ್ಕೆ ತೆರಳಿದ್ದರು. ಕರ್ತವ್ಯ ಮುಗಿಸಿ ಮಂಗಳವಾರ ಬೆಳಗಿನ ಜಾವ ಕೆ. ಹೊಸಕೋಟೆ ಠಾಣೆಗೆ ವಾಪಸಾಗುತ್ತಿರುವಾಗ, ಹೊಂಕರವಳ್ಳಿ ತಿರುವು ಬಳಿ ರಸ್ತೆಯಂಚಿನಲ್ಲಿ ಕಾಡಾನೆ ನಿಂತಿತ್ತು. ಈ ವೇಳೆ ಎಚ್ಚೆತ್ತು ಕಾರನ್ನು ಹಿಂದಕ್ಕೆ ಚಲಾಯಿಸುವಷ್ಟರಲ್ಲಿ ಓಡಿ ಬಂದ ಆನೆ ಕೋರೆಯಿಂದ ಕಾರಿನ ಮುಂದಿನ ಗಾಜಿಗೆ ಗುದ್ದಿ ಪುಡಿ ಮಾಡಿದೆ. ಸ್ವಲ್ಪ ದೂರ ಅಟ್ಟಿಸಿಕೊಂಡು ಬಂದ ಆನೆ ನಂತರ ಕಿರುಚಿಕೊಂಡು ಕಾಡಿಗೆ ಹೋಗಿದೆ. ಅದೃಷ್ಟವಶಾತ್ ಹರೀಶ್ ಪ್ರಾಣಪಾಯದಿಂದ ಪಾರಾಗಿದ್ದಾರೆ.