

ಹಿರೇಬಾಗೇವಾಡಿ, ಬೆಳಗಾವಿ: ಗ್ರಾಮದಲ್ಲಿ ನಿಲ್ಲಿಸಿದ್ದ ಮೂರು ಕಾರುಗಳ ಗಾಜು ಒಡೆದು ಸಿಸಿ ಕ್ಯಾಮರಾ ಕಿತ್ತುಕೊಂಡು ಹೋದ ಘಟನೆ ಇಲ್ಲಿನ ಪೊಲೀಸ್ ಠಾಣೆ ಸಮೀಪದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಬಸವನಗರದ ಪಿಕೆಪಿಎಸ್ ಸಂಘದ ಆವರಣದಲ್ಲಿ ಎಂದಿನಂತೆ ನಿಲ್ಲಿಸಲಾಗಿದ್ದ ಎರಡು ಕಾರು ಹಾಗೂ ಪಕ್ಕದ ಓಣಿಯಲ್ಲಿರುವ ಡಾ ಸಿ.ಎನ್.ಕೃಷ್ಣರಾವ ಅವರ ಮನೆ ಆವರಣದಲ್ಲಿ ನಿಲ್ಲಿಸಿದ್ದ ಒಂದು ಕಾರಿನ ಹಿಂಬದಿ ಗಾಜನ್ನು ಕಲ್ಲು ಎಸೆದು ಒಡೆಯಲಾಗಿದೆ. ಬ್ಯಾಂಕಿನ ಹೊರಗಡೆ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾವನ್ನು ಕಿತ್ತುಕೊಂಡು ಹೋಗಿದ್ದಾರೆ. ಸ್ಥಳೀಯ ಪೊಲೀಸರು ಪರಿಶೀಲಿಸಿ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.