

ಸಾಗರ: ಕಾರು ಇದ್ದವರಿಗೂ ಬಿಪಿಎಲ್ ಕಾರ್ಡ್ ಕೊಡುವಂತೆ ಮಾಡಿಕೊಂಡ ಮನವಿಗೆ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದರು.
ಬಿಜೆಪಿ ನಗರ ಘಟಕ 10ನೇ ವಾರ್ಡ್ ನಿವಾಸಿಗಳಿಗಾಗಿ ಭಾನುವಾರ ಆಯೋಜಿಸಿದ್ದ ಆಯುಷ್ಮಾನ್ ಭಾರತ್, ಕಾರ್ಮಿಕ ಕಾರ್ಡ್, ಈ-ಶ್ರಮ ಕಾರ್ಡ್ ಮತ್ತು ಆಧಾರ್ ಕಾರ್ಡ್ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರು ಇದ್ದವರಿಗೆ ಬಿಪಿಎಲ್ ಕಾರ್ಡ್ ಕೊಡಬಾರದು ಎನ್ನುವ ನಿಯಮಕ್ಕೆ ತಿದ್ದುಪಡಿ ತರುವಂತೆ ಸಿಎಂಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಮುಖ್ಯಮಂತ್ರಿಗಳು ಸೂಕ್ತವಾಗಿ ಸ್ಪಂದಿಸಿ, ತಿದ್ದುಪಡಿ ಮಾಡಲು ಸೂಚಿಸಿದ್ದಾರೆ ಎಂದರು.
ಅನೇಕ ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಇಂತಹ ಕಾರ್ಯಕ್ರಮಗಳ ಮೂಲಕ ಮಾಹಿತಿ ಇಲ್ಲದ ಜನರನ್ನು ಒಂದೆಡೆ ಸೇರಿಸಿ ಮಾಹಿತಿ ನೀಡುವ ಮತ್ತು ಸೌಲಭ್ಯ ತಲುಪಿಸುವ ಕೆಲಸವಾಗಬೇಕು. ತಾಲೂಕಿನ 35 ಗ್ರಾಪಂ ಮತ್ತು ನಗರಸಭೆ ವ್ಯಾಪ್ತಿಯ 31 ವಾರ್ಡ್‌ನಲ್ಲೂ ಜನಕಲ್ಯಾಣ ಕಾರ್ಡ್‌ಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವಂತೆ ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ ತಲುಪಿಸುವ ಕೆಲಸವನ್ನು ಬಿಜೆಪಿ ನಗರ ಘಟಕ ಮಾಡುತ್ತಿದೆ. ಸರ್ಕಾರ ಜನರ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಜಾರಿಗೆ ತಂದಿದೆ. ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಇಂತಹ ಕಾರ್ಯಾಗಾರ ಅಗತ್ಯ ಎಂದು ಹೇಳಿದರು.