

ಹಾಸನ : ವೇಗವಾಗಿ ಬಂದ ಟ್ಯಾಂಕರ್ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿಯಾದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೇಲೂರು-ಹಾಸನ ರಸ್ತೆ, ಜನಿವಾರ ಕ್ರಾಸ್ ಹತ್ತಿರ ಶುಕ್ರವಾರ ರಾತ್ರಿ ನಡೆದಿದೆ.
ಹಾಸನ ತಾಲೂಕು, ಕಸಬಾ ಹೋಬಳಿಯ ಕುಪ್ಪಳ್ಳಿ ಗ್ರಾಮದ ನಿವಾಸಿ ಆದರ್ಶಗೌಡ (20) ಮೃತ ದುರ್ದೈವಿ. ಹಾಸನ ನಗರದ ಪುನೀತ್ (22) ಗಾಯಗೊಂಡ ಯುವಕ.
ಯುವಕರಿಬ್ಬರು ಕೆಲಸದ ನಿಮಿತ್ತ ಕಾರಿನಲ್ಲಿ ಹಗರೆ ಗ್ರಾಮಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಹಾಸನಕ್ಕೆ ಹಿಂದಿರುಗುತ್ತಿದ್ದರು. ಆದರ್ಶಗೌಡ ಕಾರನ್ನು ಚಾಲನೆ ಮಾಡಿಕೊಂಡು ಬೇಲೂರು-ಹಾಸನ ರಸ್ತೆ, ಜನಿವಾರ ಕ್ರಾಸ್ ಹತ್ತಿರ ಬಂದಾಗ ಹಾಸನ ಕಡೆಯಿಂದ ಬೇಲೂರು ಕಡೆಗೆ ಅತಿ ವೇಗವಾಗಿ ಹೋಗುತ್ತಿದ್ದ ಟ್ಯಾಂಕರ್ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಆದರ್ಶಗೌಡ ತಲೆ ಹಾಗೂ ಕಾಲಿಗೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎಡಬದಿ ಕುಳಿತಿದ್ದ ಪುನೀತ್ ತಲೆ, ಬೆನ್ನಿಗೆ ಪೆಟ್ಟಾಗಿದ್ದು, ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.