ಕಾರವಾರದಲ್ಲಿ ಗುರುವಾರ ಶೂನ್ಯ ನೆರಳಿನ ದಿನ

30KWR2
Published on

ಕಾರವಾರ: ನಮ್ಮ ನೆರಳು ನಮ್ಮನ್ನು ಯಾವತ್ತೂ ಹಿಂಬಾಲಿಸುತ್ತದೆ ಎನ್ನುತ್ತಾರೆ. ಆದರೆ, ವರ್ಷದಲ್ಲಿ ಎರಡು ದಿನ ಮಾತ್ರ ಹಾಗಿಲ್ಲ. ಕಾರವಾರದಲ್ಲಿ ಗುರುವಾರ ಶೂನ್ಯ ನೆರಳಿನ ದಿನವಾಗಿತ್ತು. ಇಲ್ಲಿನ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಹಾಗೂ ಕೇಂದ್ರದದ ಮಾರ್ಗದರ್ಶನದಲ್ಲಿ ನಗರದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಈ ಪ್ರಯೋಗ ಮಾಡಿದರು.

ಏನಿದು ಶೂನ್ಯ ನೆರಳಿನ ದಿನ: ಭೂಮಿ ತನ್ನ ಅಕ್ಷದಿಂದ 23.5 ಡಿಗ್ರಿ ಓರೆಯಾಗಿರುವುದರಿಂದ ಭೂಮಿಯ ಮೇಲೆ ಬೀಳುವ ಸೂರ್ಯನ ನೆರಳಿನಲ್ಲಿ ವ್ಯತ್ಯಾಸವಾಗುತ್ತದೆ. ಡಿಸೆಂಬರ್ 21ರಂದು ಸೂರ್ಯ ರಷ್ಮಿ ದಕ್ಷಿಣದ ಗರಿಷ್ಠ ಬಿಂದುವಿಗೆ ತಲುಪಿ ಉತ್ತರಕ್ಕೆ ಹೊರಳುವುದರಿಂದ ನಂತರದ ದಿನಗಳನ್ನು ಉತ್ತರಾಯಣ ಎನ್ನುತ್ತಾರೆ. ಆ ದಿನ ಮಧ್ಯಾಹ್ನದ ನೆರಳು ಉಳಿದ ದಿನಗಳಿಗಿಂತ ಗರಿಷ್ಠವಾಗಿರುತ್ತದೆ. ಅದೇ ರೀತಿ ಜೂನ್ 21 ರಂದು ಉತ್ತರದ ಗರಿಷ್ಠ ತಲುಪಿ ದಕ್ಷಿಣಕ್ಕೆ ಹೊರಳುವುದರಿಂದ ಮುಂದಿನ ದಿನಗಳನ್ನು ದಕ್ಷಿಣಾಯನ ಎನ್ನಲಾಗುತ್ತದೆ. ಆ ಮಧ್ಯಾಹ್ನದ ನೆರಳು ಎಲ್ಲ ದಿನಕ್ಕಿಂತ ಕನಿಷ್ಠವಾಗಿರುತ್ತದೆ.

ಕರ್ಕಾಟಕ ಹಾಗೂ ಮಕರ ಸಂಕ್ರಾಂತಿ ವೃತ್ತಗಳ ನಡುವೆ ಇರುವ ಸ್ಥಳಗಳಲ್ಲಿ ವರ್ಷದ ಎರಡು ನಿರ್ಧಿಷ್ಟ ದಿನಗಳಲ್ಲಿ ಸೂರ್ಯ ಶಿರೋ ಬಿಂದುವಿನ ಮೇಲೆ ಹಾದು ಹೋಗುವ ಕಾರಣ ಆ ದಿನ ಮಧ್ಯಾಹ್ನ ನೆರಳು ಇಲ್ಲವಾಗುತ್ತದೆ. ಇದೇ ಶೂನ್ಯ ನೆರಳಿನ ದಿನ. ಬುಧವಾರ 12.31ಕ್ಕೆ ಸರಿಯಾಗಿ ಈ ಖಗೋಳ ಅಚ್ಚರಿ ಸಂಭವಿಸಿತು. ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯುರೇಟರ್ ಡಾ. ಸಂಜೀವ ದೇಶಪಾಂಡೆ ಈ ಪ್ರಯೋಗ ಮಾಡಿದರು. ವಿಜ್ಞಾನ ಕೇಂದ್ರದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಲಾಕ್​ಡೌನ್ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ. ಪ್ರಬಂಧ, ಚಿತ್ರಕಲೆ, ಭಾಷಣ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net