

ಕಾರವಾರ/ಶಿರಸಿ: ಎಸ್ಎಸ್ಎಲ್ಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಉತ್ತರ ಕನ್ನಡ (ಕಾರವಾರ) ಶೈಕ್ಷಣಿಕ ಜಿಲ್ಲೆ ಪರೀಕ್ಷೆಯಲ್ಲಿ ಎ ಗ್ರೇಡ್ ಪಡೆದುಕೊಂಡಿದ್ದು, ಶಿರಸಿ ಜಿಲ್ಲೆ ಬಿ ಗ್ರೇಡ್ ಪಡೆದುಕೊಂಡಿದೆ.
ಕಳೆದ ಬಾರಿ ಕಾರವಾರ ಜಿಲ್ಲೆ ರಾಜ್ಯಕ್ಕೆ 4ನೇ ಸ್ಥಾನದಲ್ಲಿತ್ತು. ಶಿರಸಿ 12 ನೇ ಸ್ಥಾನದಲ್ಲಿತ್ತು. ಈ ಬಾರಿ ರ‍್ಯಾಂಕಿಂಗ್ ಬಿಟ್ಟು ಗ್ರೇಡ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಕಾರವಾರ 10ನೇ ಸ್ಥಾನದಲ್ಲಿದ್ದರೆ, ಶಿರಸಿ 15ನೇ ಸ್ಥಾನಕ್ಕಿಳಿದಿದೆ. ಶಿರಸಿ ಜಿಲ್ಲೆಯ ಐವರು ವಿದ್ಯಾರ್ಥಿಗಳು ರಾಜ್ಯದ ಟಾಪ್ 5 ಪಟ್ಟಿಯಲ್ಲಿ, ಹಾಗೂ ಟಾಪ್ 10 ಪಟ್ಟಿಯಲ್ಲಿ ಸರ್ಕಾರಿ ಶಾಲೆಗಳ ನಾಲ್ವರು ವಿದ್ಯಾರ್ಥಿಗಳು ಸ್ಥಾನ ಪಡೆದು ಜಿಲ್ಲೆಯ ಕೀರ್ತಿ ಬೆಳಗಿದ್ದಾರೆ.
ತಾಲೂಕುವಾರು ಮಾಹಿತಿ: ಜೂನ್ 25 ರಿಂದ ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆಗೆ ಕಾರವಾರ ಜಿಲ್ಲೆಯ 186 ಪ್ರೌಢಶಾಲೆಗಳ 9,593 ವಿದ್ಯಾರ್ಥಿಗಳು ಕುಳಿತುಕೊಂಡಿದ್ದರು. ಒಟ್ಟಾರೆ ಫಲಿತಾಂಶದಲ್ಲಿ ಅಂಕೋಲಾ ಮತ್ತು ಹೊನ್ನಾವರ ತಾಲೂಕುಗಳು ಎ ಗ್ರೇಡ್ ಕಾರವಾರ, ಕುಮಟಾ ಭಟ್ಕಳಗಳು ಬಿ ಗ್ರೇಡ್ ಪಡೆದುಕೊಂಡಿವೆ.
ಅಂಕೋಲಾದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಏಳು ಶಾಲೆಗಳು ಎ ಗ್ರೇಡ್ನಲ್ಲಿ, 5 ಶಾಲೆಗಳು- ಬಿ ಗ್ರೇಡ್ ಪಡೆದಿವೆ. ಅನುದಾನಿತದಲ್ಲಿ 5 ಶಾಲೆಗಳು- ಎ ಗ್ರೇಡ್,6 ಶಾಲೆಗಳು- ಬಿ ಹಾಗೂ 2 ಶಾಲೆಗಳು- ಸಿ ಗ್ರೇಡ್ ಪಡೆದಿವೆ. 4 ಖಾಸಗಿ ಶಾಲೆಗಳು- ಎ ಗ್ರೇಡ್ ಪಡೆದಿವೆ. ಭಟ್ಕಳದ ಸರ್ಕಾರಿ ಪ್ರೌಢಶಾಲೆಗಳಲ್ಲಿ 7 ಶಾಲೆ- ಎ, ಹಾಗೂ 7 ಶಾಲೆ- ಬಿ ಗ್ರೇಡ್ ಪಡೆದಿವೆ. ಅನುದಾನಿತದಲ್ಲಿ 1 ಶಾಲೆ ಮಾತ್ರ ಎ ಗ್ರೇಡ್ ಪಡೆದಿದ್ದು, 4 ಶಾಲೆ- ಬಿ ಹಾಗೂ 4 ಶಾಲೆ- ಸಿ ಗ್ರೇಡ್ ಪಡೆದಿವೆ. ಖಾಸಗಿಯಲ್ಲಿ 9 ಶಾಲೆ - ಎ, ತಲಾ 2 ಶಾಲೆಗಳು ಬಿ ಹಾಗೂ ಸಿ ಗ್ರೇಡ್ ಪಡೆದಿವೆ. ಹೊನ್ನಾವರದ 7 ಸರ್ಕಾರಿ ಪ್ರೌಢಶಾಲೆಗಳು ಎ ಹಾಗೂ 4 ಬಿ ಗ್ರೇಡ್, ಅನುದಾನಿತದಲ್ಲಿ 9 ಶಾಲೆ -ಎ ಗ್ರೇಡ್, 5 ಶಾಲೆ- ಬಿ ಗ್ರೇಡ್ ಹಾಗೂ 2 ಶಾಲೆ -ಸಿ ಗ್ರೇಡ್ ಪಡೆದಿವೆ. 7 ಖಾಸಗಿ ಶಾಲೆಗಳು ಎ ಹಾಗೂ 2-ಬಿ ಗ್ರೇಡ್ ಪಡೆದಿವೆ. ಕಾರವಾರದಲ್ಲಿ 4 ಸ. ಪ್ರೌಢಶಾಲೆಗಳು ಎ, 3 ಶಾಲೆ -ಸಿ ಗ್ರೇಡ್ ಪಡೆದಿವೆ. 13 ಅನುದಾನಿತ ಶಾಲೆಗಳು ಎ, 10 ಶಾಲೆ -ಬಿ, ಹಾಗೂ 8 ಶಾಲೆ- ಸಿ ಗ್ರೇಡ್ ಪಡೆದಿವೆ. ಖಾಸಗಿಯಲ್ಲಿ 7 ಶಾಲೆ ಎ ಗ್ರೇಡ್, 3 -ಬಿ, ಹಾಗೂ 2 ಪ್ರೌಢಶಾಲೆಗಳು ಸಿ ಗ್ರೇಡ್ ಪಡೆದಿವೆ. ಕುಮಟಾದಲ್ಲಿ 4 ಸ. ಪ್ರೌಢಶಾಲೆಗಳು ಎ ಗ್ರೇಡ್, 3 ಶಾಲೆ- ಬಿ, ಹಾಗೂ 2-ಸಿ ಗ್ರೇಡ್ ಪಡೆದಿವೆ. ಅನುದಾನಿತದಲ್ಲಿ 6 ಶಾಲೆ -ಎ ಗ್ರೇಡ್, 11-ಬಿ, ಹಾಗೂ 3 ಪ್ರೌಢಶಾಲೆಗಳು ಸಿ ಗ್ರೇಡ್ ಪಡೆದಿವೆ.
ಶಿರಸಿ ಟಾಪ್ 5 ವಿದ್ಯಾರ್ಥಿಗಳು
ಶಿರಸಿಯ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸನ್ನಿಧಿ ಹೆಗಡೆ ಪೂರ್ಣ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ, ಸಿದ್ದಾಪುರದ ಪ್ರಶಾಂತಿ ಪ್ರೌಢಶಾಲೆಯ ವಿದ್ಯಾರ್ಥಿ ಅನಿರುದ್ಧ ಗುತ್ತಿಕರ್ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾನೆ. ಯಲ್ಲಾಪುರ ಮದರ್ ತೆರೆಸಾ ಶಾಲೆಯ ಪೂರ್ವಿ ಎಸ್.ಕೆ., ಶಿರಸಿಯ ಸೇಂಟ್ ಅಂಥೋನಿ ಶಾಲೆಯ ಅರ್ಚನಾ ಶೆಟ್ಟಿ, ಹೆಗಡೆಕಟ್ಟಾದ ಗಜಾನನ ಪ್ರೌಢಶಾಲೆಯ ಅಖಿಲಾ ಹೆಗಡೆ 622 ಅಂಕ ಪಡೆದು ರಾಜ್ಯಕ್ಕೆ 4 ನೇ ಸ್ಥಾನ ಗಳಿಸಿದ್ದಾರೆ. ರಾಜ್ಯದ ಟಾಟ್ 10 ಪಟ್ಟಿಯೊಳಗೆ ಶಿರಸಿ ಜಿಲ್ಲೆಯ ನಾಲ್ಕು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದು, ಶಿರಸಿ ಮಾರಿಕಾಂಬಾ ಪ್ರೌಢಶಾಲೆಯ ಮೂವರು ಹಾಗೂ ಯಲ್ಲಾಪುರದ ಗುಂದ ಪ್ರೌಢಶಾಲೆಯ ಒಬ್ಬ ವಿದ್ಯಾರ್ಥಿಯಿದ್ದಾರೆ.
ಕಾರವಾರ ಟಾಪ್ 3 ವಿದ್ಯಾರ್ಥಿಗಳು
ಕುಮಟಾ ಕಲಬಾಗದ ಸಿವಿಎಸ್ಕೆ ಪ್ರೌಢಶಾಲೆಯ ಸಂಜಯ ದತ್ತಾ ನಾಯಕ 623 ಅಂಕ ಪಡೆದು ರಾಜ್ಯಕ್ಕೆ 3 ನೇ ಸ್ಥಾನ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದಾನೆ. ಕಾರವಾರ ಬಾಲಭವನ ಇಂಗ್ಲಿಷ್ ಮಾಧ್ಯಮ ಶಾಲೆಯ ಸಂಚನಾ ಅರುಣ 622 ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ಸ್ಥಾನ, ಜಿಲ್ಲೆಗೆ 2 ನೇ ಸ್ಥಾನ ಪಡೆದಿದ್ದಾಳೆ. ಕಾರವಾರ ಸೇಂಟ್ ಜೋಸೆಫ್ನ ಶ್ರೇಷ್ಠಾ ಶಂಕರ ಮಾಜಾಳಿಕರ್, ಹೊನ್ನಾವರದ ದಯಾನಂದ ವಿದ್ಯಾ ಭಾರತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಜಯಂತ ರಾಜೇಂದ್ರ ಹಬ್ಬು ಹಾಗೂ ಕುಮಟಾ ಸಿವಿಎಸ್ಕೆಯ ಕಾರ್ತೀಕ ಸದಾನಂದ ನಾಯ್ಕ 620 ಅಂಕ ಪಡೆದು ರಾಜ್ಯಕ್ಕೆ 5 ನೇಯ ಹಾಗೂ ಜಿಲ್ಲೆಗೆ 3 ನೇ ಸ್ಥಾನ ಪಡೆದಿದ್ದಾರೆ.
ಅನಿರುದ್ಧ ಗುತ್ತೀಕರ ರಾಜ್ಯಕ್ಕೆ 2ನೇ ರ್ಯಾಂಕ್
ಸಿದ್ದಾಪುರ: ಪಟ್ಟಣದ ಪ್ರಶಾಂತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅನಿರುದ್ಧ ಸುರೇಶ ಗುತ್ತೀಕರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದಿದ್ದಾನೆ. ಕನ್ನಡ 125, ಇಂಗ್ಲಿಷ್ 100, ಹಿಂದಿ 100, ಗಣಿತ 100, ವಿಜ್ಞಾನ 100, ಸಮಾಜ ವಿಜ್ಞಾನ 99 ಅಂಕ ಗಳಿಸಿದ್ದಾನೆ. ಈತ ಸಿದ್ದಾಪುರ ಎಂಜಿಸಿ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ. ಸುರೇಶ ಗುತ್ತೀಕರ ಹಾಗೂ ಕಾನಗೋಡ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಕಾಂಚನಾ ಕಾಮತ್ ಅವರ ಪುತ್ರ. ಈತನ ಸಾಧನೆಗೆ ಆರ್.ಜಿ.ಪೈ. ಮಂಜೈನ್, ಶಿಕ್ಷಕರು ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿಯರ ಸಾಧನೆಗೆ ಅಡ್ಡಿಯಾಗದ ಕಷ್ಟ
ಕಾರವಾರ: ಕಷ್ಟದಲ್ಲೂ ಛಲ ಬಿಡದೇ ಓದಿದ ವಿದ್ಯಾರ್ಥಿನಿಯರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿದ್ದಾರೆ. ಮೂಲತಃ ಹಾವೇರಿ ಜಿಲ್ಲೆಯ ಸವಣೂರಿನ ಅಕ್ಷತಾ ಹಾವನೂರ ಶೇ. 90.56 ರಷ್ಟು ಅಂಕ ಪಡೆದಿದ್ದಾಳೆ. ಶಿರವಾಡದ ಕರ್ನಾಟಕ ಪಬ್ಲಿಕ್ ಸ್ಕೂಲ್ಗೆ ಮೊದಲಿಗಳಾದ ಈಕೆಯ ತಂದೆ ತಾಯಿ ಕಾರವಾರದಲ್ಲಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಮುಂಡಗೋಡು ಮೂಲದ ಐಶ್ವರ್ಯ ಬೋವಿ ಶೇ. 89.9 ರಷ್ಟು ಫಲಿತಾಂಶ ಪಡೆದಿದ್ದು, ಶಿರವಾಡ ಪಬ್ಲಿಕ್ ಸ್ಕೂಲ್ಗೆ ಎರಡನೇ ಸ್ಥಾನ ಪಡೆದಿದ್ದಾಳೆ. ಆಕೆಯ ಪಾಲಕರೂ ಕಾರವಾರದಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಾರೆ. ಶಿರವಾಡ ಸ್ಕೂಲ್ನಲ್ಲಿ ಪರೀಕ್ಷೆ ಬರೆದ 28 ರಲ್ಲಿ 26 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.