ಕಾರನ್ನೇ ಕದ್ದೋಯ್ದ ದರೋಡೆಕೋರರು

ದರೋಡೆ
ಪಟ್ಟಣದ ಉತ್ತರ ಕಾವೇರಿ ಸೇತುವೆ ರಸ್ತೆ ಮಧ್ಯೆ ಇನ್ನೋವಾ ಕಾರಿನಲ್ಲಿ ಆಗಮಿಸಿದ ದರೋಡೆಕೋರರು ಅಡ್ಡಗಟ್ಟಿ ಕಾರು ಕದ್ದೊಯ್ದ ಘಟನೆ ಕುರಿತು ಕೇರಳದ ವ್ಯಕ್ತಿಯಿಂದ ಮಾಹಿತಿ ಕಲೆಹಾಕಿದರು.
Published on

ಶ್ರೀರಂಗಪಟ್ಟಣ: ಚಲಿಸುತ್ತಿದ್ದ ಕಾರನ್ನು ರಸ್ತೆ ಮಧ್ಯೆ ಅಡ್ಡಗಟ್ಟಿದ ದರೋಡೆಕೋರರ ತಂಡವೊಂದು ಒಳಗಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಕಾರು ಸಮೇತ ಅವರ ಬಳಿ ಇದ್ದ ಹಣ ಹಾಗೂ ಮೊಬೈಲ್ ಕಿತ್ತು ಪರಾರಿಯಾಗಿದ್ದಾರೆ.

ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಉತ್ತರ ಕಾವೇರಿ ಸೇತುವೆ ಮೇಲೆ ಶುಕ್ರವಾರ ಮಧ್ಯಾಹ್ನವೇ ಘಟನೆ ನಡೆದಿದೆ.
ಕೇರಳದ ಕ್ಯಾಲಿಕಟ್ ಜಿಲ್ಲೆಯ ಚಾತಮಂಗಲ ಗ್ರಾಮದ ಅಬ್ದುಲ್ ಮಸೀದ್, ಮಹಮದ್ ಕೋಡಿಲ್ ಹಾಗೂ ನೌಶದ್ ಎಂಬುವರ ಮೇಲೆ ಹಲ್ಲೆ ಮಾಡಿರುವ ದರೋಡೆಕೋರರು ಇವರಿಗೆ ಸೇರಿದ ಟೋಯೋಟಾ ಲೀವಾ ಕಾರನ್ನು ಕದ್ದೋಯ್ದಿದ್ದಾರೆ.

ಕೇರಳದಲ್ಲಿ ಪಶು ವ್ಯಾಪಾರಿಗಳಾಗಿರುವ ಅಬ್ದುಲ್ ಮಸೀದ್, ಮಹಮದ್ ಕೋಡಿಲ್ ಹಾಗೂ ನೌಶದ್ ಅವರು ಆಂಧ್ರದ ಗುಡಿಮಂಡ ಎಂಬಲ್ಲಿ ಸಂತೆಗೆ ತೆರಳಿ 90 ಸಾವಿರ ರೂ.ಗಳಿಗೆ ಎಮ್ಮೆಗಳನ್ನು ಖರೀದಿಸಿ ವಾಪಸ್ ಬರುತ್ತಿದ್ದರು.ಕೆ.ಬಿ ಕ್ರಾಸ್ ಮಾರ್ಗವಾಗಿ ಆಗಮಿಸಿದ ಇವರು ಮಾರ್ಗ ಮಧ್ಯೆ ನಾಗಮಂಗಲ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಹೋಟೆಲ್ ಒಂದರಲ್ಲಿ ಊಟ ಮಾಡಿ ಪ್ರಯಾಣ ಮುಂದುವರೆಸಿದ್ದು, ಶ್ರೀರಂಗಪಟ್ಟಣ ಪ್ರವೇಶಿಸುತ್ತಿದ್ದಂತೆ ಇನ್ನೋವಾ ಕಾರಿನಲ್ಲಿ ಇವರ ಕಾರನ್ನು ಹಿಂಬಾಲಿಸಿಕೊಂಡು ಬಂದ ಐವರು ದರೋಡೆಕೋರರು ಏಕಾಏಕಿ ಉತ್ತರ ಕಾವೇರಿ ಸೇತುವೆ ರಸ್ತೆ ಮಧ್ಯೆ ಇವರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಕೇರಳಿಗರು ಇದ್ದ ಲೀವಾ ಕಾರಿನ ಗಾಜು ಒಡೆದು ಒಳಗೆ ಕುಳಿತಿದ್ದ ಮೂವರ ಮೇಲೂ ಪೆಪ್ಪರ್ ಸ್ಪ್ರೇ ಮಾಡಿ ಕಾರಿಂದ ಹೊರಗೆಳೆದಿದ್ದಾರೆ. ಬಳಿಕ ಇವರ ಬಳಿ ಇದ್ದ 10 ಸಾವಿರ ರೂ. ಹಣ, 3 ಮೊಬೈಲ್ ಹಾಗೂ 1 ರ‌್ಯಾಡೋ ಕೈಗಡಿಯಾರವನ್ನು ದೋಚಿ ಕಾರಿನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ಮುರುಳಿ, ಇನ್ಸ್‌ಪೆಕ್ಟರ್ ಬಿ.ಎಸ್.ಪ್ರಕಾಶ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದಾರೆ. ಘಟನೆ ಸಂಬಂಧ ಅಬ್ದುಲ್ ಮಸೀದ್ ಶ್ರೀರಂಗಪಟ್ಟಣ ಟೌನ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net