ಕಾರಂಜಾ ಹಿನ್ನೀರು ಖಾಲಿ ಮಾಡಿಸಿ

Karnja Dharani
Published on

ಬೀದರ್: ಕಾರಂಜಾ ಜಲಾಶಯದ ಸ್ವಾಧೀನಪಡಿಸಿಕೊಳ್ಳದ ಭೂಮಿಯಲ್ಲಿ ನಿಂತಿರುವ ಹಿನ್ನೀರು ಕೂಡಲೇ ಖಾಲಿ ಮಾಡಿಸುವಂತೆ ಒತ್ತಾಯಿಸಿ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯಿಂದ ಸೋಮವಾರ ಡಿಸಿ ಕಚೇರಿ ಎದುರು ಧರಣಿ ನಡೆಯಿತು.

ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಹೊಚಕನಳ್ಳಿ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಸಮಿತಿ ಪದಾಧಿಕಾರಿಗಳು, ಸಂತ್ರಸ್ತ ರೈತರು ಪಾಲ್ಗೊಂಡಿದ್ದರು. ಶೀಘ್ರದಲ್ಲಿ ಜಿಲ್ಲಾಡಳಿತ ಹಿನ್ನೀರು ಖಾಲಿ ಮಾಡಿಸದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಜಲಾಶಯದ ಅಚ್ಚುಕಟ್ಟು ಪ್ರದೇಶದ ಸುಮಾರು 2 ಸಾವಿರ ಎಕರೆ ಹೆಚ್ಚುವರಿ ಜಮೀನನ್ನು ಈವರೆಗೂ ಭೂಸ್ವಾಧೀನಪಡಿಸಿಕೊಂಡಿಲ್ಲ. ಈ ಪೂರ್ಣ ಭೂಮಿ ಕಾರಂಜಾ ಹಿನ್ನೀರಿನಲ್ಲಿ ಮುಳುಗಿದೆ. ಸಮೃದ್ಧವಾಗಿ ಬಂದಿದ್ದ ಕಬ್ಬು ಬಹುತೇಕ ಹಾಳಾಗಿದೆ. ಇತರೆ ಬೆಳೆಗಳು ಸಹ ನೀರುಪಾಲಾಗಿ ವ್ಯಾಪಕ ಹಾನಿಯಾಗಿದೆ. ಈಗಲೂ ಹೊಲದಲ್ಲಿ ಬಹಳಷ್ಟು ನೀರು ಸಂಗ್ರಹವಿದ್ದು, ಅಳಿದುಳಿದ ಬೆಳೆ ಉಳಿಯಬೇಕಾದರೆ ಹಾಗೂ ಕಬ್ಬು ಕಟಾವಿಗಾಗಿ ನೀರು ಖಾಲಿ ಮಾಡಿಸಲೇಬೇಕು. ಎರಡು ವಾರದೊಳಗೆ ಸಕ್ಕರೆ ಕಾರ್ಖಾನೆಗಳು ಕೃಷಿಂಗ್ ಬಂದ್ ಮಾಡಲಿರುವ ಕಾರಣ ಈ ಕೆಲಸ ತುರ್ತಾಗಿ ಕೈಗೊಂಡು ರೈತರ ನಷ್ಟ ತಡೆಯಬೇಕೆಂದು ಆಗ್ರಹಿಸಿದರು.

ಭೂಮಿ ಕಳೆದುಕೊಂಡ ರೈತರಿಗೆ ವೈಜ್ಞಾನಿಕ ಬೆಲೆಗಾಗಿ ನಿರಂತರ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಕಾರಂಜಾ ಸಂತ್ರಸ್ತರ ಸಮಸ್ಯೆಗೆ ಕಡೆಗಣಿಸಿದ್ದಾರೆ. ಇನ್ನಾದರೂ ನಮ್ಮ ಬೇಡಿಕೆಯತ್ತ ಗಮನಹರಿಸದಿದ್ದರೆ ತೀವ್ರ ಹೋರಾಟ ಅನಿವಾರ್ಯ ಎಂದರು.

ಪ್ರಮುಖರಾದ ನಾಗಶೆಟ್ಟೆಪ್ಪ ಹಚ್ಚಿ, ಬಸವರಾಜ ಮೂಲಗೆ, ಶಂಕರರಾವ ಗುಂಡಪ್ಪ, ಮಾಣಿಕ, ವೀರಶೆಟ್ಟಿ, ರಮೇಶರೆಡ್ಡಿ, ಸಿದ್ರಾಮಪ್ಪ, ಅರ್ಜುನ, ಮಲ್ಲಶೆಟ್ಟಪ್ಪ, ಸೂರ್ಯಕಾಂತ , ಸೋಮನಾಥ, ಕುತ್ಬುದೀನ್, ಹಣಮಂತರಾವ, ಪ್ರಭುರಾವ, ಚಂದ್ರಶೇಖರ ಮುತ್ತಣ್ಣ, ಕರಬಸಪ್ಪ, ಮಹೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net