ಕಾರಂಜಾ ಜಲಾಶಯ ಬಳಿ ಉದ್ಯಾನ ನಿರ್ಮಿಸಿ

Shantayya Swamy
Published on

ಬೀದರ್: ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ(ಕೆ) ಸಮೀಪದ ಕಾರಂಜಾ ಜಲಾಶಯ ಬಳಿ ಮೈಸೂರಿನ ಬೃಂದಾವನ ಉದ್ಯಾನ ಮಾದರಿಯಲ್ಲಿ ಮಿನಿ ಉದ್ಯಾನ ನಿರ್ಮಿಸಬೇಕು ಎಂದು ಜಾತ್ಯತೀತ ಜನತಾ ದಳದ ಭಾಲ್ಕಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಶಾಂತಯ್ಯ ಬಿ. ಸ್ವಾಮಿ ಒತ್ತಾಯಿಸಿದ್ದಾರೆ.
ಕಾರಂಜಾ ಜಲಾಶಯದ ದಂಡೆ ಕೆಳಗಿನ 40 ಎಕರೆ ಫಲವತ್ತಾದ ಭೂಮಿ ಉದ್ಯಾನ ನಿರ್ಮಾಣಕ್ಕೆ ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಬೀದರ್ ಕೋಟೆ, ಗುರುದ್ವಾರ, ಪಾಪನಾಶ, ನರಸಿಂಹ ಝರಣಿ ದೇಗುಲ, ಮಹಮ್ಮದ್ ಗವಾನ್, ಮದರಸಾ, ಬಸವಕಲ್ಯಾಣದ ಅನುಭವ ಮಂಟಪ ಸೇರಿ ಅನೇಕ ಐತಿಹಾಸಿಕ ಸ್ಥಳಗಳಿವೆ ಎಂದು ತಿಳಿಸಿದ್ದಾರೆ.
ಬೀದರ್‍ನಲ್ಲಿ ಈಗ ವಿಶ್ವವಿದ್ಯಾಲಯವೂ ಸ್ಥಾಪನಗೊಂಡಿದೆ. ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧೆಡೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳ ಪ್ರವಾಸಿಗರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರವಾಸಿ ತಾಣ ಹಾಗೂ ಕಾರಂಜಾ ಜಲಾಶಯ ವೀಕ್ಷಣೆಗೆ ಬೀದರ್‍ಗೆ ಬರುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾರಂಜಾ ಜಲಾಶಯದ ಹತ್ತಿರ ಉದ್ಯಾನ ನಿರ್ಮಿಸಿದರೆ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಇನ್ನಷ್ಟು ಮೆರುಗು ಬರಲಿದೆ. ಆದ್ದರಿಂದ ಅಭಿವೃದ್ಧಿ ಪರವಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಈ ಬಗ್ಗೆ ಸಂಬಂಧಪಟ್ಟವರಿಂದ ವರದಿ ತರಿಸಿಕೊಂಡು ಉದ್ಯಾನ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net