

ಧಾರವಾಡ: ಜೀವಸಂಕುಲಗಳನ್ನು ರಕ್ಷಿಸುವುದು ಮತ್ತು ಅವುಗಳ ಸಹನಶೀಲ ಬಳಕೆಗಾಗಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸುವ ಜವಾಬ್ದಾರಿಯನ್ನು ಜೀವವೈವಿಧ್ಯ ಕಾಯ್ದೆ ಹೊಂದಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವರ ಏರ್ಪಡಿಸಿದ್ದ ಜೀವವೈವಿಧ್ಯ ಮಂಡಳಿಯ ಸಭೆಯಲ್ಲಿ ಅವರು ಮಾತನಾಡಿದರು.
ರಾಷ್ಟ್ರ ಮಟ್ಟದಲ್ಲಿ ಜಾರಿಗೆ ಬಂದಿರುವ ಜೀವವೈವಿಧ್ಯ ಕಾಯ್ದೆಯ ಸೆಕ್ಷನ್ 63ರ ಅಡಿ ರಾಜ್ಯ ಸರ್ಕಾರವು ರೂಪಿಸಿರುವ ಕರ್ನಾಟಕ ಜೀವವೈವಿಧ್ಯ ನಿಯಮಾವಳಿಗಳ ಅಡಿಯಲ್ಲಿ ಸಂಸ್ಥೆಯ ಕಾರ್ಯ ಚಟುವಟಿಕೆ ನಡೆಯುತ್ತಿವೆ. ನಗರಸಭೆ, ಗ್ರಾಮ ಪಂಚಾಯಿತಿ ಸಮಿತಿಯಲ್ಲಿರುವ ಸದಸ್ಯರಿಗೆ ಸುಸ್ಥಿರ ಜೀವವೈವಿಧ್ಯದ ಬಗ್ಗೆ ತರಬೇತಿ ನೀಡಲಾಗುವುದು ಎಂದರು.
ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಉಣಕಲ್ ಕೆರೆ, ಸಾಧನಕೆರೆ ಮತ್ತು ಕೆಲಗೇರಿ ಕೆರೆಗಳ ಸೌಂದಯೀಕರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿ, ನಗರ ಹಾಗೂ ಪಟ್ಟಣಗಳಲ್ಲಿ ಜೀವವೈವಿಧ್ಯ ಸಮಿತಿ ರಚಿಸಲಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಯಶ್ಪಾಲ್ ಕ್ಷೀರಸಾಗರ, ಸಾಮಾಜಿಕ ಅರಣ್ಯ ಅಧಿಕಾರಿ ಶ್ರೀನಿವಾಸ, ತಾಲೂಕು ಮಟ್ಟದ ಅರಣ್ಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದ್ದು.
ಜೀವವೈವಿಧ್ಯ ದಿನ ಮೇ 22ಕ್ಕೆ: ಜಾಗತಿಕ ಜೀವವೈವಿಧ್ಯ ದಿನವನ್ನು ಮೇ 22ರಂದು ಎಲ್ಲ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಆಚರಿಸಬೇಕು ಎಂದು ಅನಂತ ಹೆಗಡೆ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜೀವವೈವಿಧ್ಯ, ಅರಣ್ಯ, ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಕುರಿತು ವಿಶೇಷ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿ, ಜೀವವೈವಿಧ್ಯ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಗಳು ಶೇ. 5ರಷ್ಟು ಅನುದಾನ ಬಳಸಿಕೊಳ್ಳಲು ಸೂಚಿಸಬೇಕು ಎಂದರು. ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಜಲಾಮೃತ ಯೋಜನೆಗೆ ರಾಜ್ಯ ಸರ್ಕಾರ ಕೆರೆ ಹೂಳೆತ್ತಲು ಅನುದಾನ ನೀಡಿದೆ. 195 ಕೆರೆಗಳ ಹೂಳೆತ್ತುವಿಕೆ ಮತ್ತು ಹಸಿರೀಕರಣ ಕಾರ್ಯ ಮಾಡಲಾಗುತ್ತದೆ ಎಂದರು.
ಸಾಮಾಜಿಕ ಅರಣ್ಯ ಅಧಿಕಾರಿ ಶ್ರೀನಿವಾಸ, ತಾಲೂಕು, ಜಿಲ್ಲಾ ಮಟ್ಟದ ಅರಣ್ಯ ಮತ್ತು ಇತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಜನತಾ ಜೀವವೈವಿಧ್ಯ: ಗ್ರಾಮ, ಪ.ಪಂ., ತಾಲೂಕು ಹಾಗೂ ಜಿಲ್ಲಾ ಮಟ್ಟದ ಜನತಾ ಜೀವವೈವಿಧ್ಯ ದಾಖಲಾತಿ ರಚಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಜೀವವೈವಿಧ್ಯ ನಿರ್ವಹಣಾ ಸಮಿತಿಯೊಂದರ ವ್ಯಾಪ್ತಿಯ ಪ್ರದೇಶದಲ್ಲಿರುವ ಸಸ್ಯ, ಪ್ರಾಣಿವೈವಿಧ್ಯ, ಅವುಗಳ ಸಂರಕ್ಷಣೆ, ಸುಸ್ಥಿರ ಬಳಕೆ ಕುರಿತ ಸ್ಥಳೀಯ ಪಾರಂಪರಿಕ ಜ್ಞಾನದ ದಾಖಲೀಕರಣವೇ ಜನತಾ ಜೀವವೈವಿಧ್ಯ ದಾಖಲಾತಿ ಎಂದು ವಿವರಿಸಿದರು. ಅಪರೂಪದ ಔಷಧಿ ಸಸ್ಯಗಳ ಸಂರಕ್ಷಣೆಗಾಗಿ ವಿಶೇಷ ಯೋಜನೆ ಸಿದ್ಧಪಡಿಸಲು ಬಜೆಟ್ನಲ್ಲಿ ಅನುದಾನ ಒದಗಿಸುವಂತೆ ಕೋರಲಾಗಿದೆ ಎಂದು ತಿಳಿಸಿದರು.