

ಚಿಕ್ಕಬಳ್ಳಾಪುರ: ಕೃಷಿಯ ಸುಧಾರಣೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳನ್ನು ವಿರೋಧಿಸುವಲ್ಲಿ ರಾಜಕೀಯ ಪ್ರೇರಿತ ಮಧ್ಯವರ್ತಿಗಳ ಷಡ್ಯಂತ್ರವಿದೆ ಎಂದು ಜಿಲ್ಲಾ ಬಿಜೆಪಿ ಮಾಧ್ಯಮ ಸಹ ವಕ್ತಾರ ರಮೇಶ್ ಬಾಯರಿ ಆರೋಪಿಸಿದರು.
ಕೃಷಿ ಕ್ಷೇತ್ರದ ಸುಧಾರಣೆ ಮತ್ತು ರೈತರ ಆದಾಯ ದ್ವಿಗುಣಗೊಳಿಸಲು ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ (ಕಲ್ಯಾಣ ಮತ್ತು ರಕ್ಷಣೆ) ಕಾಯ್ದೆ, ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ ಜಾರಿಗೆ ತಂದಿದ್ದಾರೆ. ಆದರೆ, ಇದನ್ನು ದಲ್ಲಾಳಿಗಳು ಮತ್ತು ಕಮೀಷನ್ ಏಜೆಂಟರು ವಿರೋಧಿಸುತ್ತಿದ್ದು, ಕೆಲ ಸಂಘಟನೆಗಳು ದುರುದ್ದೇಶದಿಂದ ಬೆಂಬಲಿಸಿವೆ ಎಂದು ನಗರದಲ್ಲಿ ಏರ್ಪಡಿಸಿದ್ದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಹಿಂದೆ ಕೇಂದ್ರ ಕೃಷಿ ಸಚಿವರಾಗಿದ್ದ ಶರದ್ ಪವಾರ್ ಹೊಸ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ತರಲು ಪ್ರಸ್ತಾವನೆ ಮಂಡಿಸಿದ್ದರು. ಇದು ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲೂ ಪ್ರಸ್ತಾಪವಾಗಿತ್ತು. ಆದರೆ, ಈ ಮೊದಲು ಬೆಂಬಲಿಸುತ್ತಿದ್ದ ಕೆಲ ರಾಜಕೀಯ ಪಕ್ಷಗಳು ಇದೀಗ ವಿರೋಧಿಸುತ್ತಿವೆ. ಇದಕ್ಕೆ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಎಚ್ಚರಿಸಿದರು.
ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಅಪ್ಪಾಲು ಮಂಜುನಾಥ್, ಗ್ರಾಮೀಣ ಮಂಡಲ್ ಅಧ್ಯಕ್ಷ ಕೆ.ಎಸ್.ಕೃಷ್ಣಾರೆಡ್ಡಿ, ಮುಖಂಡರಾದ ಅಗಲಗುರ್ಕಿ ಚಂದ್ರಶೇಖರ್, ರಾಮಣ್ಣ, ಲಕ್ಷ್ಮೀಪತಿ, ವಿ.ಮಧುಚಂದ್ರ ಮತ್ತಿತರರು ಇದ್ದರು.