ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

10 Dwd 11a
Published on

ಧಾರವಾಡ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಹಿತರಕ್ಷಣಾ ಪರಿವಾರ ಹಾಗೂ ವಿವಿಧ ರೈತಪರ ಸಂಘಟನೆಗಳಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಮಾತನಾಡಿ, ಶಾಸಕರ ಮೈಯಲ್ಲಿ ರೈತಪರ ರಕ್ತ ಹರಿಯುತ್ತಿದ್ದರೆ ರೈತ ವಿರೋಧಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಿನ್ನೆಲೆಯಲ್ಲಿ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಸದನದಲ್ಲಿ ವಿರೋಧಿಸಲಿ ಎಂದು ಸವಾಲು ಹಾಕಿದರು.

ರೈತರು ಉಳುಮೆ ಮಾಡುವ ಫಲವತ್ತಾದ ಭೂಮಿಯನ್ನು ಶ್ರೀಮಂತರ ಉಡಿಗೆ ಹಾಕುವ ಮೂಲಕ ರೈತವರ್ಗವನ್ನು ಹಾಳು ಮಾಡಲಾಗುತ್ತಿದೆ. ಈ ವರ್ಷ 70,000 ಕೋಟಿ ರೂ. ಮೌಲ್ಯದ ಪಾಮ್ ಎಣ್ಣೆ ತಂದು ಜನರಿಗೆ ತಿನ್ನಿಸಲಾಗುತ್ತಿದೆ. ಅದರಿಂದ ಹೃದಯಾಘಾತಗಳು ಹೆಚ್ಚಿವೆ. ರೈತರನ್ನು ಸಾಹುಕಾರರ ಮನೆ ಮುಂದೆ ಕೈಯೊಡ್ಡಿ ನಿಲ್ಲುವಂತೆ ಮಾಡುವ ಭೂ ಸುಧಾರಣೆ ಕಾಯ್ದೆ ವಿರುದ್ಧ ಎಲ್ಲರೂ ಪಕ್ಷಾತೀತವಾಗಿ ಧ್ವನಿ ಎತ್ತಬೇಕು. ಯಡಿಯೂರಪ್ಪಗೆ ಕುರ್ಚಿಯಿಂದ ಇಳಿಸುವ ಎಚ್ಚರಿಕೆ ನೀಡಿ ಕಾಯ್ದೆ ಜಾರಿಗೆ ತರಲಾಗಿದೆ. ಅವರಿಗೆ ರೈತ ಕಾಳಜಿ ಇದ್ದರೆ ಕುರ್ಚಿ ಬಿಟ್ಟು ರೈತರ ಪರವಾಗಿ ನಿಲ್ಲಲಿ ಎಂದರು.

ರೈತ ಹಿತರಕ್ಷಣಾ ಪರಿವಾರದ ಸಂಚಾಲಕ ಪಿ.ಎಚ್. ನೀರಲಕೇರಿ, ಅಖಂಡ ಕರ್ನಾಡಕ ರೈತ ಸಂಘದ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ, ವಕೀಲರಾದ ಶಂಕರಗೌಡ ಪಾಟೀಲ, ಪ್ರಕಾಶ ಉಡಿಕೇರಿ, ಮುಖಂಡರಾದ ಗುರುರಾಜ ಹುಣಸಿಮರದ, ಶಂಕರ ಕಾಜಗಾರ, ರಾಜಶೇಖರ ಮೆಣಸಿನಕಾಯಿ, ಶಂಕರ ಅಂಬಲಿ, ಬಿ.ಸಿ. ಕೊಣ್ಣೂರ, ಬಸವರಾಜ ಮಲಕಾರಿ, ಶಾಂತಮ್ಮ ಗುಜ್ಜಳ, ಸ್ವಾತಿ ಮಾಳಗಿ, ಮಂಜುನಾಥ ಭೋವಿ, ಎಂ.ಎಫ್. ಹಿರೇಮಠ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net