

ಹುಬ್ಬಳ್ಳಿ: ಎಪಿಎಂಸಿ ಕಾಯ್ದೆ ತಿದ್ದುಪಡಿ ಕುರಿತು ವರ್ತಕರಲ್ಲಿರುವ ಎಲ್ಲ ಗೊಂದಲಗಳಿಗೆ ವಾರದಲ್ಲಿ ತೆರೆ ಬೀಳಲಿದೆ ಎಂದು ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಕರಿಗೌಡ ಭರವಸೆ ನೀಡಿದರು.
ಎಫ್ಕೆಸಿಸಿಐ ಸಂಸ್ಥೆಯು ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಎಪಿಎಂಸಿ ಕಾಯ್ದೆಗೆ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ಹಾಗೂ ಸೆಸ್ ವಿಚಾರದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವರ್ತಕರು ಪಾಲುದಾರರಾಗಿದ್ದು, ಸೆಸ್ ಪ್ರಮಾಣ ಎಷ್ಟು ಕಡಿಮೆ ಮಾಡಬಹುದು ಎಂಬುದು ಮಾತ್ರ ಪ್ರಶ್ನೆಯಾಗಿದೆ. ಸಹಬಾಳ್ವೆಯ ಸಂಕೇತದಂತೆ ಈ ಸಮಸ್ಯೆ ಬಗೆಹರಿಸಲು ಸರ್ಕಾರ ನಿರ್ಧರಿಸಲಿದೆ. ಈ ಕುರಿತು ಈಗಾಗಲೇ ಚಿಂತನೆ ನಡೆಸಲಾಗುತ್ತಿದೆ ಎಂಬ ಆಶ್ವಾಸನೆ ನೀಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳು ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ದನ, ಎಪಿಎಂಸಿ ವರ್ತಕರು ಹಾಗೂ ಪ್ರಾಂಗಣದ ಹೊರಗೆ ನಡೆಯುವ ವ್ಯಾಪಾರಸ್ಥರಿಗೂ ಸಮಾನಂತರ ವ್ಯವಸ್ಥೆ ಸೃಷ್ಟಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದರು.
ಎಪಿಎಂಸಿ ಚೇರ್ಮನ್ ರಮೇಶಚಂದ್ರ ಲಹೋಠಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂವಾದದಲ್ಲಿ ಹಾಜರಿದ್ದ ಕೆಎಲ್ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಪಿ.ಡಿ. ಶಿರೂರ, ಜಾವೇದ್, ಪ್ರಸನ್ನ ಕುಮಾರ, ಸಂಜಯ, ಬಸವರಾಜ, ತ್ರಿವಿಕ್ರಮ ಜೋಶಿ, ರಾಮಚಂದ್ರ, ಸಾಯಿರಾಂ ಪ್ರಸಾದ, ಗದಗ, ರೋಣ ಎಪಿಎಂಸಿ ಪದಾಧಿಕಾರಿಗಳು ಕೆಲ ಸಲಹೆ ನೀಡಿದರು. ಹುಬ್ಬಳ್ಳಿ ವರ್ತಕರ ಸಂಘದ ಬಸವರಾಜ ಯಕಲಾಸಪುರ, ಉಪಾಧ್ಯಕ್ಷ ಶಂಕ್ರಣ್ಣ ನೇಗಿನಹಾಳ ಇತರರು ಅಭಿಪ್ರಾಯ ಮಂಡಿಸಿದರು. ಇದೇ ವೇಳೆ ನಿರ್ದೇಶಕರನ್ನು ಗೌರವಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. ಹಿರಿಯ ಉಪಾಧ್ಯಕ್ಷ ಪೆರಿಕಲ್ ಎಂ. ಸುಂದರ್ ಅತಿಥಿಗಳನ್ನು ಪರಿಚಯಿಸಿದರು. ಉಪಾಧ್ಯಕ್ಷ ಸಿಎ ಐ.ಎಸ್. ಪ್ರಸಾದ ವಂದಿಸಿದರು.
ಎಪಿಎಂಸಿ ಪ್ರಾಂಗಣಗಳ ನಿರ್ವಹಣೆ ವಿಚಾರ ಗಮನದಲ್ಲಿಟ್ಟುಕೊಂಡು 10 ಪೈಸೆ ಸೆಸ್ ವಸೂಲಿ ಮಾಡಿದಲ್ಲಿ ಅಂದಾಜು 200ರಿಂದ 300 ಕೋಟಿ ರೂ. ಶುಲ್ಕ ಸಂಗ್ರಹ ಆಗಲಿದೆ. | ರಮೇಶಚಂದ್ರ ಲಹೋಠಿ, ಎಪಿಎಂಸಿ ಚೇರ್ಮನ್