ಕಾಯಿಲೆ ಪತ್ತೆಗೆ ಶಿಬಿರ ಸಹಾಯಕ: ಡಾ.ಎಚ್.ಎಲ್.ಸುಬ್ಬರಾವ್ ಹೇಳಿಕೆ, -ಆರೋಗ್ಯ ತಪಾಸಣಾ ಕಾರ್ಯಕ್ರಮ,

DVG-SHIBIRA-29.jpg
Published on

ದಾವಣಗೆರೆ: ಸಕಾಲದಲ್ಲಿ ಕಾಯಿಲೆಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲು ಆರೋಗ್ಯ ಶಿಬಿರಗಳು ಸಹಾಯಕವಾಗಿವೆ ಎಂದು ಸಿಟಿ ಸೆಂಟ್ರಲ್ ಹಾಸ್ಪಿಟಲ್ ಅಧ್ಯಕ್ಷ ಡಾ.ಎಚ್.ಎಲ್. ಸುಬ್ಬರಾವ್ ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ, ಸಂಕಲ್ಪ ಸೇವಾ ಫೌಂಡೇಶನ್, ಸಿಟಿ ಸೆಂಟ್ರಲ್ ಹಾಸ್ಪಿಟಲ್ ಸಹಯೋಗದಲ್ಲಿ ನಗರದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣೆ ಮತ್ತು 2024ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಮೊಬೈಲ್ ಗೀಳು ಹೆಚ್ಚಾಗಿದ್ದು, ಇದರಿಂದ ಹೊರಬಂದು ನೆರೆಹೊರೆಯವರೊಂದಿಗೆ ಉಭಯ ಕುಶಲೋಪರಿ ಹಂಚಿಕೊಂಡಾಗ ಮಾನಸಿಕ ಆರೋಗ್ಯ ಲಭಿಸುತ್ತದೆ. ಪ್ರತಿದಿನ ನಡಿಗೆ, ವ್ಯಾಯಾಮ, ಆಟಗಳಿಂದ ದೈಹಿಕ ಆರೋಗ್ಯ ವೃದ್ಧಿಸಿಕೊಳ್ಳಬಹುದು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ಜಿಲ್ಲಾ ಸರ್ಕಾರಿ ನೌಕರರ ಸಂಘವು ಕ್ರೀಡೆ, ಮೊದಲಾದ ಕಾರ್ಯಕ್ರಮ ಆಯೋಜಿಸುವ ಮೂಲಕ ನೌಕರರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಪ್ರತಿದಿನ ಒತ್ತಡದಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ಸಂಘದ ಕಾರ್ಯ ಚಟುವಟಿಕೆಗೆ ಸದಾ ಬೆನ್ನೆಲುಬಾಗಿರುವುದಾಗಿ ಹೇಳಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ ಎಸ್. ಒಡೇನಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಜತೆಗೆ ಪರಿಸರ ಕಾಪಾಡಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯದಿಂದ ಯಾವುದೇ ಸಾಧನೆ ಕೈಗೊಳ್ಳಬಹುದು ಎಂದರು.

ಸಂಘದ ಕಾರ್ಯಾಧ್ಯಕ್ಷ ಬಿ. ಫಾಲಾಕ್ಷಿ ಮಾತನಾಡಿ, ಆಧುನಿಕ ದಿನಗಳಲ್ಲಿ ಸಾರ್ವಜನಿಕರು ಹಾಗೂ ನೌಕರರು ಒತ್ತಡದ ಜೀವನ ನಡೆಸುತ್ತಿದ್ದು, ಎಲ್ಲರೂ ಉತ್ತಮ ಆರೋಗ್ಯ ಪಡೆದು ಸಮಾಜದ ಸ್ವಾಸ್ಥೃ ಕಾಪಾಡಬೇಕು. ಉತ್ತಮ ಮನಸ್ಸಿನಿಂದ ಕಾಯಕದಲ್ಲಿ ತೊಡಗಿದಾಗ ಆರೋಗ್ಯಯುತ ಬದುಕಿನೊಂದಿಗೆ ಎಲ್ಲ ಭಾಗ್ಯಗಳು ಲಭಿಸುತ್ತವೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್. ಷಣ್ಮುಖಪ್ಪ, ಸಂಕಲ್ಪ ಸೇವಾ ಫೌಂಡೇಶನ್ ಅಧ್ಯಕ್ಷ ಜಿ. ಮಹಾಂತೇಶ್

ಕೀಲು ಮೂಳೆ ಶಸ್ತ್ರ ಚಿಕಿತ್ಸಾ ತಜ್ಞ ಡಾ.ನಿತೀಶ್ ಕೊಟ್ರಪ್ಪ, ನೇತ್ರ ತಜ್ಞ ಡಾ.ಜಿ. ಸುನಿಲ್, ಜಿಲ್ಲಾ ನೌಕರರ ಸಂಘದ ಕಾರ್ಯದರ್ಶಿ ಸಿ.ಗುರುಮೂರ್ತಿ, ರಾಜ್ಯ ಪರಿಷತ್ ಸದಸ್ಯೆ ಮಂಜಮ್ಮ, ಸಂಘಟನಾ ಕಾರ್ಯದರ್ಶಿ ಶಿವಾನಂದ ದಳವಾಯಿ, ಜಂಟಿ ಕಾರ್ಯದರ್ಶಿ ಕೆಎಂಎಚ್ ಸ್ವಾಮಿ ಇದ್ದರು. ಖಜಾಂಚಿ ಬಿ.ಆರ್. ತಿಪ್ಪೇಸ್ವಾಮಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net