

ಬೆಟ್ಟದಪುರ: ರೇಬಿಸ್ ರೋಗದ ಬಗ್ಗೆ ಯಾರೂ ಆತಂಕಪಡಬೇಕಿಲ್ಲ. ಅದನ್ನು ತಡೆಗಟ್ಟುವ ಸಲುವಾಗಿ ಮುಂಜಾಗ್ರತೆಯಿಂದ ನಾಯಿಗಳಿಗೆ ಮೊದಲೇ ಲಸಿಕೆ ಕೊಡಿಸುವುದು ಉತ್ತಮ ಎಂದು ವೈದ್ಯಾಧಿಕಾರಿ ಡಾ.ಆರ್.ಸಂದೀಪ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ವೇಕ್ಷಣ ಘಟಕದ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಿಶ್ವ ರೇಬಿಸ್ ತಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಯಿ ಕಚ್ಚಿದರೆ ಪಶುಗಳು ಮೇವನ್ನು ಮೇಯದೆ ಜೊಲ್ಲು ಸುರಿಸುತ್ತಾ ಇರುತ್ತವೆ. ಅಂತಹ ಸಂದರ್ಭದಲ್ಲಿ ಕೂಡಲೇ ಪಶು ವೈದ್ಯಾಧಿಕಾರಿ ಅವರಿಂದ ಪರೀಕ್ಷಿಸಬೇಕಾಗುತ್ತದೆ ಎಂದು ತಿಳಿಸಿದರು.
ರೇಬಿಸ್ ರೋಗ ಇರುವ ನಾಯಿ ಕಚ್ಚಿದರೆ ಮನುಷ್ಯರು ನೀರು, ಗಾಳಿ ಮತ್ತು ಬೆಳಕು ಕಂಡಾಗ ಹೆದರುತ್ತಾರೆ. ಹಾಗಾಗಿ, ರೇಬಿಸ್ ಇರುತ್ತೋ, ಇಲ್ಲವೋ ನಾಯಿಗಳಿಗೆ ವ್ಯಾಕ್ಸಿನ್ ನೀಡುವುದು ಒಳ್ಳೆಯದು. ನಾಯಿ ಮನುಷ್ಯರಿಗೆ ಕಚ್ಚಿದಾಗ ಅದೇ ದಿನ ಮೊದಲ ಚುಚ್ಚುಮದ್ದು(ವ್ಯಾಕ್ಸಿನ್) ಪಡೆಯುವುದು ಉತ್ತಮ ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಸಿ.ಪಿ.ಸುರೇಶ್, ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಎಸ್.ರವಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಶೀಲಾವತಿ, ಮುಖಂಡ ಸಿ.ಎನ್ ರಾಜಣ್ಣ ಸೇರಿದಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಇದ್ದರು.