ಕಾಯಮಾತಿಗಾಗಿ ಗುತ್ತಿಗೆ ಕಾರ್ಮಿಕರ ಧರಣಿ

karmika.jpg
Published on

ದಾವಣಗೆರೆ: ನೀರು ಸರಬರಾಜು ವಿಭಾಗದ ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರ ಸೇವೆ ಕಾಯಮಾತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರಪಾಲಿಕೆ ಎದುರು ನೀರು ಸರಬರಾಜು ಕಾರ್ಮಿಕರು ಮತ್ತು ಸ್ಮಶಾನ ಕಾವಲುಗಾರರು ಸೋಮವಾರದಿಂದ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿಯ ಧರಣಿ ಆರಂಭಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರತ ನೀರು ಸರಬರಾಜು ವಿಭಾಗದ ಒಳಚರಂಡಿ, ಸ್ಮಶಾನ ಕಾವಲುದಾರರು, ವಾಹನ ಚಾಲಕರು ಸೆರಿ ಒಟ್ಟು 135 ಜನರ ಸೇವೆ ಕಾಯಂ ಮಾಡಬೇಕು. ಸುಮಾರು 10-15 ವರ್ಷದಿಂದ ದುಡಿಯುತ್ತಿರುವ ನೌಕರರ ಬಗ್ಗೆ ಸರ್ಕಾರ ಕಣ್ತೆರೆಯಬೇಕು ಎಂದು ಮುಷ್ಕರನಿರತರು ಆಗ್ರಹಿಸಿದರು.

ನೌಕರರನ್ನು ಕಾಯಂಗೊಳಿಸುವವರೆಗೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಗುತ್ತಿಗೆ ಕಾರ್ಮಿಕರಿಗೆ ನೇರ ಪಾವತಿಯಡಿ ವೇತನ ನೀಡಬೇಕು. ಸುಪ್ರೀಂಕೋರ್ಟ್ ತೀರ್ಪಿನನ್ವಯ ಎಲ್ಲ ಕಾರ್ಮಿಕರಿಗೂ ಸಮಾನ ಕೆಲಸಕ್ಕೆ ಸಮಾನ ಸಂಬಳ ಪಾವತಿಸಬೇಕು. ದಿನದ ಎಂಟು ಕೆಲಸ, ಹೆಚ್ಚುವರಿ ಕೆಲಸಕ್ಕೆ ಕಾನೂನುಬದ್ಧ ವೇತನ, ವಾರದಲ್ಲಿ ಒಂದು ದಿನ ಸಂಬಳಸಹಿತ ರಜೆ, ರಾಷ್ಟ್ರೀಯ ಹಬ್ಬ, ಗಳಿಕೆ, ಅನಾರೋಗ್ಯ ಹಿನ್ನೆಲೆಯ ರಜೆಗಳನ್ನು ನೀಡಬೇಕು.

ನಿವೃತ್ತಿ/ ಮರಣ ಹೊಂದುವ ಸ್ಥಳೀಯ ಸಂಸ್ಥೆಗಳ ಕಾರ್ಮಿಕರ ಅವಲಂಬಿತರಿಗೆ ಉಪಧನ ನೀಡುವ ಸಂಬಂಧ ಸ್ಪಷ್ಟ ಆದೇಶ ಹೊರಡಿಸಬೇಕು. ಗುತ್ತಿಗೆದಾರರು ಕಾರ್ಮಿಕರಿಂದ ಕಟಾಯಿಸಿದ ಭವಿಷ್ಯನಿಧಿ, ಇಎಸ್‌ಐ ಅನ್ನು ಸರಿಯಾಗಿ ಪಾವತಿಸದೆ ಹಲವೆಡೆ ಹಗರಣಗಳೇ ನಡೆದಿವೆ. ಇದನ್ನು ತಡೆಯಲು ಮೂಲ ಮಾಲೀಕರಾದ ಸ್ಥಳೀಯ ಸಂಸ್ಥೆಗಳೇ ಇದನ್ನು ನಿರ್ವಹಿಸಬೇಕು. ಅಲ್ಪ ವೇತನದಲ್ಲಿ ಬದುಕುತ್ತಿರುವ ಎಲ್ಲ ಕಾರ್ಮಿಕರಿಗೂ ಸರ್ಕಾರದ ಗೃಹಭಾಗ್ಯ ಯೋಜನೆಯಡಿ ಉಚಿತ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಮೇಯರ್ ಬಿ.ಎಚ್. ವಿನಾಯಕ್ ಆಗಮಿಸಿ ಮನವಿ ಸ್ವೀಕರಿಸಿ, ಸರ್ಕಾರದ ಹಂತದಲ್ಲಿ ಈ ಬಗ್ಗೆ ಗಮನ ಸೆಳೆಯಲಾಗುವುದು ಎಂದು ಹೇಳಿದರು. ಧರಣಿಯಲ್ಲಿ ನೌಕರರ ಸಂಘದ ಅಧ್ಯಕ್ಷ ಎಂ. ನೀಲಗಿರಿಯಪ್ಪ, ಉಪಾಧ್ಯಕ್ಷ ರಾಧಾಕೃಷ್ಣ, ಎಲ್.ಎಂ.ಎಚ್.ಸಾಗರ್, ಓಮೇಶ್, ರಜನಿಕಾಂತ್, ದುರ್ಗೇಶ್, ಮಂಜನಗೌಡ, ಶೆಟ್ಟಪ್ಪ, ಅಂಜಿನಪ್ಪ, ರಾಜನಹಳ್ಳಿ ರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net