

ಔರಾದ್: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಲ್ಲಿ ಗ್ರಾಮೀಣ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಕಾಯಕೋತ್ಸವ ಶಕ್ತಿ ಅಭಿಯಾನ ಆರಂಭಿಸಲಾಗಿದೆ ಎಂದು ತಾಪಂ ಇಒ ಮಾಣಿಕರಾವ ಪಾಟೀಲ್ ಹೇಳಿದರು.
ತಾಲೂಕಿನ ಬೋರ್ಗಿ (ಜೆ) ಗ್ರಾಮದಲ್ಲಿ ಮಹಿಳಾ ಕಾಯಕೋತ್ಸವ ಶಕ್ತಿ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ನರೇಗಾ ಅಡಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡಲು ಉತ್ತೇಜಿಸಲು ಈ ಅಭಿಯಾನ ಆರಂಭಿಸಲಾಗಿದೆ. ತಾಲೂಕಿನ ನಾಲ್ಕು ಗ್ರಾಪಂಗಳಲ್ಲಿ ಮಹಿಳಾ ಕೂಲಿಕಾರ್ಮಿಕರ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಪ್ರತಿಯೊಬ್ಬರೂ ಇದರ ಸದ್ಬಳಕೆ ಪಡೆಯಲು ಕೋರಿದರು.
ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಮಾತನಾಡಿ, ನರೇಗಾ ಯೋಜನೆಯಡಿ ಗಂಡು-ಹೆಣ್ಣಿಗೆ ಸಮವಾಗಿ ಕೂಲಿ ನೀಡಲಾಗುತ್ತಿದೆ. ದಿನಕ್ಕೆ 275 ರೂ.ಗಳಂತೆ ವಾರ್ಷಿಕ 100 ದಿನ ಉದ್ಯೋಗ ನೀಡಲಾಗುತ್ತಿದೆ. ಮಹಿಳಾ ಕೂಲಿಕಾರ್ಮಿಕರು ಯೋಜನೆ ಲಾಭ ಪಡೆದುಕೊಳ್ಳಬೇಕು ಎಂದರು.
ಪಿಡಿಒ ಅನೀಲಕುಮಾರ ಚಿಟ್ಟಾ, ಸಂಗೀತಾ ದೇಶಮುಖ, ಜೈಪ್ರಕಾಶ, ಮಾರುತಿ, ಬಸವರಾಜ ಇತರರಿದ್ದರು.