

ಮೈಸೂರು: ತಾವು ಬಿಎಸ್‌ಪಿಗೆ ಸೇರ್ಪಡೆಯಾದ ಬಳಿಕ ಕೆ.ಆರ್. ನಗರದ ಕೆಲ ಕಾಂಗ್ರೆಸ್ ಮುಖಂಡರು ಕಾಯಕ ಸಮಾಜದ ಒಕ್ಕೂಟವನ್ನು ಒಡೆಯುವ ಹುನ್ನಾರ ನಡೆಸಿದ್ದಾರೆ ಎಂದು ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ. ಪುಟ್ಟಸಿದ್ದಶೆಟ್ಟಿ ಆರೋಪಿಸಿದರು.
ತಾವು ಯಾವ ಕಾರಣಕ್ಕೂ ಒಕ್ಕೂಟವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡಿಲ್ಲ. ಒಕ್ಕೂಟದಲ್ಲಿ ಇತರ ಪಕ್ಷಗಳ ಹಲವರು ಸಹ ಇದ್ದಾರೆ. ಹೀಗಿದ್ದರೂ ನನ್ನ ಬಗ್ಗೆ ಅಪಪ್ರಚಾರ ಮಾಡಿ, ದಮನ ಮಾಡಲು ನಗರದಲ್ಲಿ ಒಕ್ಕೂಟದ ಮತ್ತೊಂದು ಸಭೆ ಕರೆಯುವ ಹುನ್ನಾರ ನಡೆಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ನಾವು ರಾಜ್ಯದಲ್ಲಿ ಬಿಎಸ್‌ಪಿ ಗಟ್ಟಿಗೊಳಿಸಲು ಶ್ರಮಿಸುತ್ತಿದ್ದು, ಪಕ್ಷದ ಕೋರ್ ಕಮಿಟಿಗೂ ನನ್ನನ್ನು ನೇಮಕ ಮಾಡಲಾಗಿದೆ. ಇದೇ ವೇಳೆ ರಾಜ್ಯದಲ್ಲಿ ಈ ಬಾರಿ ನಡೆಯುವ ವಿಧಾನಸಭಾ ಚುನಾವಣೆಗೆ ಎಲ್ಲ 224 ಕ್ಷೇತ್ರಗಳಲ್ಲೂ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ ಎಂದರು.