ಕಾಯಕ ಮರೆತು ಕಷ್ಟಕ್ಕೆ ಬೀಳಬೇಡಿ

2107KLB01
Published on

ಕಲಬುರಗಿ: ಬೇರೆ ಬೇರೆ ಸಮಾಜದವರು ಕ್ಷೌರಿಕ ಕಾಯಕ ಮಾಡಿ, ಕಾರ್‌ನಲ್ಲಿ ತಿರುಗಾಡುತ್ತಿದ್ದಾರೆ. ಹಡಪದ ಸಮಾಜದವರು ಕಾಯಕವನ್ನು ಮರೆಯದೇ ಅದರ ಸದ್ವಿನಿಯೋಗ ಮಾಡಿಕೊಂಡು ಮುಂದೆ ಸಾಗಬೇಕು. ದುಶ್ಚಟಗಳಿಂದ ದೂರ ಇರಬೇಕು ಎಂದು ಮುದಗಲ್ಲದ ಮಹಾತೇಶ್ವರ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಮತ್ತು ಜಿಪಂ, ಜಿಲ್ಲಾ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವದಲ್ಲಿ ಮಾತನಾಡಿ, ಹಡಪದ ಸಮಾಜವೂ ಆರ್ಥಿಕ, ಸಾಮಾಜಿಕ, ಔದ್ಯೋಗಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಶಿಕ್ಷಣಕ್ಕೆ ಆದ್ಯತೆ ನೀಡಿದಾಗ ಇದಕ್ಕೆ ಪರಿಹಾರ ದೊರೆಯಲಿದೆ ಎಂದು ಸಲಹೆ ನೀಡಿದರು.
ಹಡಪದ ಅಪ್ಪಣ್ಣ ಸೇವಾನಿಷ್ಠರಾಗಿ, ಸಮ ಸಮಾಜ ನಿರ್ಮಿಸುವ ಕೈಂಕರ್ಯಕ್ಕೆ ನಿಧಿಯಾಗಿದ್ದರು. ಬಸವಣ್ಣನವರ ನೇತೃತ್ವದ ಅನುಭವ ಮಂಟಪದಲ್ಲಿ ಅಪ್ಪಣ್ಣ ಶರಣರು ಜ್ಞಾನಿಯಾಗಿ ಹೊರಹೊಮ್ಮಿದ್ದರು. ೨೪೩ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ. ಸೂರ್ಯ-ಚಂದ್ರ ಇರುವರೆಗೂ ಶರಣರ ವಚನಗಳು ಅಮರವಾಗಿರುತ್ತದೆ.
ಸಮಾಜದ ಪಾಲಕರು ಮಕ್ಕಳಿಗೆ ಶಿಕ್ಷಣ ನೀಡಬೇಕು. ಶರಣರ ವಚನಗಳನ್ನು ಅಧ್ಯಯನ ಮಾಡಿಸಬೇಕು. ಅಂಗದ ಮೇಲೆ ಲಿಂಗ, ಹಣೆ ಮೇಲೆ ವಿಭೂತಿ ಧರಿಸಿ ಕಾಯಕ ನಿಷ್ಠರಾಗಬೇಕು ಎಂದರು.
ಚಿತ್ತಾಪುರದ ಕಂಬಳೇಶ್ವರ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು, ಕಾಯಕದ ಜತೆಗೆ ದಾಸೋಹ ಮಾಡಬೇಕು ಎಂದರು.
ಶಿವಶರಣ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಸಿ.ಹಡಪದ ಮಾತನಾಡಿ, ರಾಜ್ಯದಲ್ಲಿ ೨೦ಲಕ್ಷಕ್ಕೂ ಅಧಿಕ ಹಡಪದ ಸಮಾಜದ ಜನಸಂಖ್ಯೆ ಇದ್ದು, ರಾಜಕೀಯ ಪಕ್ಷಗಳು ಸಮಾಜದ ಓರ್ವ ವ್ಯಕ್ತಿಗೆ ರಾಜ್ಯಸಭೆ, ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆ ಮಾಡಬೇಕು ಎಂದರು.
ಬಾಲಬ್ರಹ್ಮಚಾರಿ ರಾಜ ಶಿವಯೋಗಿಗಳು, ದತ್ತಪ್ಪ ಸಾಗನೂರ, ಬಸವರಾಜ ಹಡಪದ, ಜಗದೀಶ, ಕುಪೇಂದ್ರ ಲಾಡವಂತಿ, ಆನಂದ ವಾರಿಕ, ಮಲ್ಲಿಕಾರ್ಜುನ, ಬಸವರಾಜ ಹಳ್ಳಿ, ಬಸವರಾಜ ಸೂಗೂರ, ಶರಣು ಸೂರ್ಯವಂಶಿ, ಮಲ್ಲಿಕಾರ್ಜುನ ಮಾನೆ, ಮಲ್ಲಿಕಾರ್ಜುನ ಸೂಗೂರ, ಸುನಿಲ್‌ಭಾಗ್ ಹಿಪ್ಪರಗಿ, ಮಹಾಂತೇಶ ಇಸ್ಲಾಂಪುರ, ಅನೀಲ, ಆನಂದ ಖೇಳಗಿ, ಆನಂದ ಹಡಪದ, ಅಪ್ಪಣ್ಣ ಹಡಪದ, ಮಂಜು ಅವರಾದ, ಗಂಗಾಧರ ಹಡಪದ, ಕಂಟು ಹಡಪದ, ಗುರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net