

ತುಮಕೂರು: ಈಗಾಗಲೇ ತಡವಾಗಿರುವ ತುಮಕೂರು ವಿವಿ ಕಾಯಂ ಕುಲಪತಿ ನೇಮಕಕ್ಕೆ ವಿಳಂಬವಾಗುವ ಸೂಚನೆ ಕಂಡುಬಂದಿದ್ದು ಶೈಕ್ಷಣಿಕ ಚಟುವಟಿಕೆಗಳಿಗೆ ಗ್ರಹಣ ಬಡಿದಂತಾಗಿದೆ.
ವಿಸಿ ಆಯ್ಕೆಗೆ ನೇಮಕವಾಗಿದ್ದ ಶೋಧನಾ ಸಮಿತಿ ಮಾ.30ರಂದು ನಡೆಸಿದ್ದ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ಸರ್ಕಾರಕ್ಕೆ ಮೂವರ ಹೆಸರನ್ನು ಶಿಫಾರಸು ಮಾಡಿ ವಾರ ಕಳೆದರೂ ರಾಜ್ಯಪಾಲರಿಗೆ ಪಟ್ಟಿ ಹೋಗದಿರುವುದು ನೇಮಕ ವಿಳಂಬವಾಗಿಸಿದೆ.
ವಿವಿ ಮೂಲಗಳ ಪ್ರಕಾರ ಪ್ರೊ.ವೆಂಕಟೇಶ್ವರಲು, ಮೈಸೂರಿನ ಪ್ರೊ.ವೆಂಕಟೇಶ್ಕುಮಾರ್, ಹಂಪಿ ವಿವಿ ಪ್ರೊ.ವಿಜಯ್ ಹೆಸರುಗಳನ್ನು ಶೋಧನಾ ಸಮಿತಿ ಅಂತಿಮಗೊಳಿಸಿದ್ದು, ಸರ್ಕಾರದ ಹಂತದಲ್ಲಿ ಕಡತ ನಿಂತಿರುವುದು ವಿವಿಧ ಊಹಾಪೋಹಕ್ಕೆ ಕಾರಣವಾಗಿದ್ದು ಆಯ್ಕೆ ಕುತೂಹಲ ಮೂಡಿಸಿದೆ.
ವಿವಿ ಸಿಂಡಿಕೇಟ್ ಸದಸ್ಯರು ಸೋಮವಾರ ರಾಜಭವನದಲ್ಲಿ ರಾಜ್ಯಪಾಲ ತಾವರ್ಚಂದ್ ಗೆಹಲೋತ್ ಅವರನ್ನು ಭೇಟಿಯಾಗಿ, ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳು ಪೂರ್ಣವಾಗುತ್ತಿದ್ದು ಪ್ರಭಾರ ಕುಲಪತಿಗಳು ಯಾವುದೇ ದಿಟ್ಟ ನಿರ್ಧಾರ ತೆಗೆದುಕೊಳ್ಳದೆ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದ್ದು ಶ್ರೀವಾಗಿ ಕಾಯಂ ಕುಲಪತಿ ನೇಮಕ ಮಾಡಬೇಕು ಎಂದು ಮನವಿ ಕೂಡ ಮಾಡಿದ್ದಾರೆ.
ತುಮಕೂರು ವಿವಿಯಲ್ಲಿ ಅನುಷ್ಠಾನವಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಗತಿ, ಅಗತ್ಯವಿರುವ ಸಹಾಯಕ ಪ್ರಾಧ್ಯಾಪಕರು, ಸಿಬ್ಬಂದಿ ನೇಮಕ ಹಾಗೂ ಪ್ರಭಾರ ಕುಲಪತಿಗಳ ಕಾರ್ಯವೈಖರಿ ಸೇರಿ ವಿವಿಧ ಬೇಡಿಕೆಗಳ ಪಟ್ಟಿ ರಾಜ್ಯಪಾಲರ ಅಂಗಳ ತಲುಪಿದ್ದು ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.
ಪ್ರಭಾರ ಕುಲಪತಿಗಳ ವಿರುದ್ಧ ದೂರು?: ಕಳೆದ ಎರಡು ಸಿಂಡಿಕೇಟ್ ಸಭೆಯಲ್ಲಿಯೂ ವಿವಿ ಶೈಕ್ಷಣಿಕ ಬೆಳವಣಿಗೆ ತುರ್ತು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಅಸಹಾಯಕತೆ ವ್ಯಕ್ತಪಡಿಸಿರುವ ಪ್ರಭಾರ ಕುಲಪತಿ ಪ್ರೊ.ಸುದರ್ಶನರೆಡ್ಡಿ ಹಾಗೂ ಪ್ರೊ.ಕೇಶವ ವಿರುದ್ಧವೂ ರಾಜ್ಯಪಾಲರಿಗೆ ಸಿಂಡಿಕೇಟ್ ಸದಸ್ಯರು ದೂರು ನೀಡಿದ್ದಾರೆ ಎನ್ನಲಾಗಿದೆ.
ಕುಲಪತಿಯಾಗಿ ಎಲ್ಲ ಸವಲತ್ತು, ಅಧಿಕಾರ ಪಡೆಯುತ್ತಿರುವ ಶೈಕ್ಷಣಿಕ ಚಟುವಟಿಕೆಗೆ ನಿರ್ಧಾರ ತೆಗೆದುಕೊಳ್ಳಲು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಆದರೆ, ಇತ್ತೀಚೆಗೆ ಸಿಂಡಿಕೇಟ್ ಗಮನಕ್ಕೂ ತರದೇ, ಹಿಂದಿನ ಸಭೆಯ ರ್ನಿಣಯಗಳನ್ನು ಮೀರಿ ಕೆಲವು ವಿಭಾಗದ ಮುಖ್ಯಸ್ಥರು, ಸಂಚಾಲಕರನ್ನು ಬದಲಾಯಿಸಿ, ಶೈಕ್ಷಣಿಕ ವಾತಾವರಣವನ್ನು ಕೆಡಿಸಿದ್ದು ವಿದ್ಯಾರ್ಥಿಗಳು ಪ್ರತಿಭಟನೆಗಿಳಿಯುವ ಪರಿಸ್ಥಿತಿ ತಂದೊಡ್ಡಿದ್ದಾರೆ ಎಂದು ರಾಜ್ಯಪಾಲರ ಗಮನಕ್ಕೆ ತಂದಿದ್ದಾರೆ ಎಂದು ವಿವಿ ಮೂಲಗಳು ತಿಳಿಸಿವೆ.
ನತೆವೆತ್ತ ರಾಜ್ಯಪಾಲರನ್ನು ಭೇಟಿಯಾಗಿ ಕಲ್ಪತರು ನಾಡಿನ ತೆಂಗಿನಸಸಿ ನೀಡಿ ವಿಶ್ವ ಪರಿಸರ ದಿನದ ಶುಭಾಶಯಗಳನ್ನು ತಿಳಿಸಿದೆವು. ವಿಶ್ವವಿದ್ಯಾಲಯದ ಶೈಣಿಕ ಬೆಳವಣಿಗೆ ಮತ್ತು ರಾಷ್ಟ್ರೀಯ ಶಿಣ ನೀತಿ ಅನುಷ್ಠಾನದ ಪ್ರಕ್ರಿಯೆಯ ಬಗ್ಗೆ ಆಸಕ್ತಿಯಿಂದ ಚರ್ಚಿಸಿದರು. ಗುಣಮಟ್ಟದ ಶೈಕ್ಷಣಿಕ ಬೆಳವಣಿಗೆ ಅಗತ್ಯವಿರುವ ಕೆಲವು ಬೇಡಿಕೆಗಳನ್ನು ರಾಜ್ಯಪಾಲರಿಗೆ ಸಲ್ಲಿಸಿ, ಮನವಿ ಮಾಡಿದ್ದೇವೆ.
ಆರ್.ಕೆ.ಶ್ರೀನಿವಾಸ್ ಸಿಂಡಿಕೇಟ್ ಸದಸ್ಯ