ಕಾಮಗೆರೆಯಲ್ಲಿ ಮಂಡಲೋತ್ಸವ

09 HANUR 2
Published on

ಹನೂರು: ಸಮೀಪದ ಕಾಮಗೆರೆ ಗ್ರಾಮದಲ್ಲಿ ಗುರುವಾರ ರಾತ್ರಿ ಸಾವಿರಾರು ಭಕ್ತರ ಸಮುಖದಲ್ಲಿ ಚಂದ್ರ ಮಂಡಲೋತ್ಸವವು ವಿಜೃಂಭಣೆಯಿಂದ ಜರುಗಿತು.


ಚಂದ್ರ ಮಂಡಲೋತ್ಸವದ ಪ್ರಯುಕ್ತ ರಾತ್ರಿ ಗ್ರಾಮದ ಕೆರೆ ಏರಿಯ ಬಳಿ ಇರುವ ಮಹದೇಶ್ವರ ದೇಗುಲ ಹಾಗೂ ದೊಡ್ಡಬೀದಿಯ ಸಿದ್ದಪ್ಪಾಜಿ ದೇವಸ್ಥಾನ ಸೇರಿದಂತೆ ಗ್ರಾಮದ ಪ್ರತಿ ಬೀದಿಯನ್ನೂ ತಳಿರು ತೋರಣ, ವಿವಿಧ ವಿದ್ಯುತ್ ದೀಪಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು.


ಬೆಳಗ್ಗೆ ಕುರುಬನಕಟ್ಟೆ ಕಂಡಾಯವನ್ನು ಗ್ರಾಮಕ್ಕೆ ತಂದು ಪೂಜೆ ಸಲ್ಲಿಸಲಾಯಿತು. ಬಳಿಕ ಕಂಡಾಯಗಳಿಗೆ ಪುಷ್ಪಗಳಿಂದ ಸಿಂಗರಿಸಿ ರಾತ್ರಿ 10ರ ವೇಳೆಯಲ್ಲಿ ಅರ್ಚಕರು ಹಾಗೂ ಗ್ರಾಮಸ್ಥರು ಗ್ರಾಮದ ಮಹದೇಶ್ವರ ದೇವಸ್ಥಾನದ ಬಳಿ ಇರುವ ಕೆರೆಗೆ ತೆರಳಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು.


ನಂತರ ಮಹದೇಶ್ವರ ದೇಗುಲದ ಮೂಲಕ ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ದೊಡ್ಡ ಬೀದಿಯಲ್ಲಿರುವ ಸಿದ್ದಪ್ಪಾಜಿ ದೇವಸ್ಥಾನ ತಲುಪಿತು. ಮೆರವಣಿಗೆಯುದ್ದಕ್ಕೂ ಯುವಕರು ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.


ಮಹಾಜ್ಯೋತಿ: ದೇವಸ್ಥಾನದ ಸಮೀಪದಲ್ಲಿ ವಿವಿಧ ಪುಷ್ಪ ಹಾಗೂ ದೀಪಗಳಿಂದ ಕಂಗೊಳಿಸುವಂತೆ ಸಿದ್ಧಪಡಿಸಿದ್ದ ಮಹಾಜ್ಯೋತಿಯನ್ನು ರಾತ್ರಿ 12 ಗಂಟೆಗೆ ಬೆಳಗಿಸಲಾಯಿತು. ಈ ಮೂಲಕ ನೆರೆದಿದ್ದ ಭಕ್ತರು ಚಂದ್ರ ಮಂಡಲೋತ್ಸವವನ್ನು ಕಣ್ತುಂಬಿಕೊಂಡರು. ಈ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.


ಕೊಳ್ಳೇಗಾಲ ಸೇರಿದಂತೆ ಹನೂರು, ಮಂಗಲ, ಕಣ್ಣೂರು, ಗುಂಡಾಪುರ, ಬೂದುಬಾಳು, ಸಿಂಗಾನಲ್ಲೂರು, ದೊಡ್ಡಿಂದುವಾಡಿ, ಮಧುವನಹಳ್ಳಿ ಹಾಗೂ ಈ ಭಾಗದ ಇನ್ನಿತರ ಗ್ರಾಮದ ಜನರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.


ಗ್ರಾಮಕ್ಕೆ ವಿವಿಧ ಕಡೆಗಳಿಂದ ಆಗಮಿಸಿದ ಕಂಡಾಯಗಳಿಗೆ ಶುಕ್ರವಾರ ಬೆಳಗ್ಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ಗ್ರಾಮದ ಬೀದಿಗಳಲ್ಲಿ ಸಂಚರಿಸುವ ಮೂಲಕ ಕಂಡಾಯ ಉತ್ಸವವನ್ನು ನೆರವೇರಿಸಲಾಯಿತು. ಪ್ರತಿ ಮನೆಯವರೂ ಕಂಡಾಯ ಉತ್ಸವಕ್ಕೆ ಹಣ್ಣು ಕಾಯಿ ನೀಡಿ ಪೂಜೆ ಸಮರ್ಪಿಸಿದರು.

ಕಾಮಗೆರೆ ಗ್ರಾಮದಲ್ಲಿ ಗುರುವಾರ ರಾತ್ರಿ ಕಂಡಾಯ ಉತ್ಸವವು ವಿಜೃಂಭಣೆಯಿಂದ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net