ಕಾಮಗೆರೆ ಆಸ್ಪತ್ರೆ ಪ್ರಥಮ ಚಿಕಿತ್ಸೆಗಷ್ಟೇ ಸೀಮಿತ

18 HANUR 3
Published on

ಹನೂರು: ಸಮೀಪದ ಕಾಮಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಒಂದು ವಾರದಿಂದ ವೈದ್ಯರು ಇಲ್ಲದ ಪರಿಣಾಮ ಜನರು ಚಿಕಿತ್ಸೆ ಪಡೆಯಲು ಪರದಾಡುವಂತಾಗಿದೆ.


1959ರಲ್ಲಿ ಗ್ರಾಮದ ಈ ಸರ್ಕಾರಿ ಆಸ್ಪತ್ರೆ ತೆರೆಯಲಾಗಿದ್ದು, ಇಲ್ಲಿಗೆ ಕಾಮಗೆರೆ ಸೇರಿದಂತೆ ಸಿಂಗಾನಲ್ಲೂರು, ಬೂದುಬಾಳು, ಗುಂಡಾಪುರ, ಮಂಗಲ, ಆನಾಪುರ, ಕಣ್ಣೂರು, ಚನ್ನಾಲಿಂಗನಹಳ್ಳಿ ಹಾಗೂ ಇನ್ನಿತರ ಗ್ರಾಮಗಳಿಂದ ಜನರು ಚಿಕಿತ್ಸೆ ಪಡೆಯಲು ಬರುತ್ತಾರೆ. ಪ್ರಸ್ತುತ ಈ ಕೇಂದ್ರದಲ್ಲಿ ನಾಲ್ವರು ಸಮುದಾಯ ಆರೋಗ್ಯ ಅಧಿಕಾರಿ, ನಾಲ್ವರು ಎಎನ್‌ಎಂ ಸಿಬ್ಬಂದಿ ಹಾಗೂ ಒಬ್ಬರು ಸ್ಟಾಫ್ ನರ್ಸ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯೆ ಡಾ.ಲಾವಣ್ಯ ಅವರು ಉನ್ನತ ಶಿಕ್ಷಣಕ್ಕೆ ತೆರಳಿದ್ದಾರೆ. ಹಾಗಾಗಿ ಈ ಆಸ್ಪತ್ರೆಯಲ್ಲಿ ಒಂದು ವಾರದಿಂದ ವೈದ್ಯರು ಇಲ್ಲದಂತಾಗಿದೆ. ಇದರಿಂದ ಈ ಭಾಗದ ಜನರಿಗೆ ಸೂಕ್ತ ಚಿಕಿತ್ಸೆ ಸಿಗದಂತಾಗಿದ್ದು, ಪ್ರಥಮ ಚಿಕಿತ್ಸೆಗಷ್ಟೇ ಸೀಮಿತವಾಗಿದೆ.


ಇದರಿಂದ ಜನರು ಚಿಕಿತ್ಸೆ ಪಡೆಯಬೇಕಾದರೆ ಸಮೀಪದ ದೊಡ್ಡಿಂದುವಾಡಿ ಹಾಗೂ ಹನೂರಿನ ಸರ್ಕಾರಿ ಆಸ್ಪತ್ರೆಗೆ ಅಲೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಬಡವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಕಷ್ಟ ಅನುಭವಿಸುತ್ತಿದ್ದಾರೆ. ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಸಂಬಂಧಪಟ್ಟವರು ಇನ್ನು ಮುಂದಾದರೂ ಇತ್ತ ಗಮನಹರಿಸಿ ವೈದ್ಯರನ್ನು ನಿಯೋಜಿಸುವುದರ ಮೂಲಕ ಉತ್ತಮ ಅರೋಗ್ಯ ಸೇವೆ ಒದಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಡಾ.ಗೋಪಾಲ್, ಟಿಎಚ್‌ಒ ಪ್ರತಿಕ್ರಿಯಿಸಿ, ಕಾಮಗೆರೆ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರು ಉನ್ನತ ಶಿಕ್ಷಣಕ್ಕೆ ತೆರಳಿದ್ದಾರೆ. ಹಾಗಾಗಿ ತಾಲೂಕಿನ ಮಧುವನಹಳ್ಳಿ, ದೊಡ್ಡಿಂದುವಾಡಿ ಹಾಗೂ ತೆಳ್ಳನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರನ್ನು ದಿನದ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವಂತೆ ಸದ್ಯದಲ್ಲಿಯೇ ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net