

ಕಾರ್ಗಲ್: ಪಟ್ಟಣ ಪಂಚಾಯಿತಿ ಕೋರಿಕೆ ಮೇರೆಗೆ ಜಿಲ್ಲಾಡಳಿತವು ಕಾರ್ಗಲ್ ಪಟ್ಟಣದ ಮಹಾಗಣಪತಿ ಉತ್ಸವ ಮಂಟಪದ ಜಾಗದಲ್ಲಿ ನಡೆಸಲು ಉದ್ದೇಶಿಸಿರುವ ಕಾಮಗಾರಿಯಿಂದ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದೇವಾಲಯ ಸಮಿತಿ ಪದಾಕಾರಿಗಳು ಶಾಸಕ ಗೋಪಾಲಕೃಷ್ಣ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ನಗರೋತ್ಥಾನ ಯೋಜನೆಯಡಿ ಸುಮಾರು 81 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ನೂತನ ಬಸ್ ನಿಲ್ದಾಣದಿಂದ ದೇವಸ್ಥಾನದ ಜಾಗಕ್ಕೆ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳಬೇಕು. ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಭವಿಷ್ಯದ ವಿದ್ಯುತ್ ಬೇಡಿಕೆ ದೃಷ್ಟಿಯಿಂದ ಪಂಪ್ಡ್ ಸ್ಟೋರೇಜ್ ಯೋಜನೆ ಸೂಕ್ತ ಯೋಜನೆ. ವಿದ್ಯುತ್ ಉತ್ಪಾದನೆ ವಿಚಾರದಲ್ಲಿ ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಶರಾವತಿ ಕಣಿವೆ ಯೋಜನಾ ಪ್ರದೇಶದಲ್ಲಿ ಪ್ರಸ್ತುತ ಸುಮಾರು 1500 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಅದರ ಜತೆಗೆ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಮತ್ತೆ 2 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗಲಿದೆ ಎಂದರು.
ಪ್ರಸಕ್ತ ಕಾಲಘಟ್ಟದಲ್ಲಿ ಹೊಸ ಅಣೆಕಟ್ಟುಗಳ ನಿರ್ಮಾಣ ಅಸಾಧ್ಯ. ಲಭ್ಯವಿರುವ ಕಿರು ಅಣೆಕಟ್ಟುಗಳ ಸಹಕಾರದಿಂದ ನೀರನ್ನು ಮರು ಬಳಕೆ ಮಾಡಬಹುದಾದ ಉತ್ತಮ ಯೋಜನೆಯಾಗಿದೆ. ಕಡಿಮೆ ಪರಿಸರ ನಾಶದ ಜತೆಗೆ ಕಡಿಮೆ ವೆಚ್ಚದಲ್ಲಿ ನಿರ್ಮಾಣ ಮಾಡಬಹುದಾದ ಯೋಜನೆ ಇದಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಗಳನ್ನು ಮಾಡುವಾಗ ಲಕ್ಷಾಂತರ ಮರಗಳನ್ನು ಕಡಿಯಲಾಗಿದೆ. ಆಗ ಇವರ ಪರಿಸರ ಕಾಳಜಿ ಎಲ್ಲಿ ಹೋಗಿತ್ತು. ಅನಗತ್ಯವಾಗಿ ಯೋಜನೆ ಹೆಸರು ಹೇಳಿ ಕೆಲವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಉಮೇಶ್, ಕಾರ್ಯದರ್ಶಿ ಸಂತೋಷ್ ಕುಮಾರ್, ಪ್ರಧಾನ ಅರ್ಚಕ ಮಂಜುನಾಥ್ ಭಟ್, ಪ್ರಮುಖರಾದ ಎಂ.ಮೋಹನ್ ಪೈ, ವಿಜಯ ಕುಮಾರ್, ಪ್ರೇಂ ಕುಮಾರ್ ಜೈನ್, ದೇವೇಂದ್ರ, ಬಾಬಣ್ಣ ಮುಂತಾದವರಿದ್ದರು.