

ಚಿತ್ರದುರ್ಗ: ಕವಾಡಿಗರ ಹಟ್ಟಿಯಲ್ಲಿ ನೂತನ ಪೈಪ್‌ಲೈನ್ ಅಳವಡಿಕೆ ಆರ್‌ಒ ಘಟಕ ನಿರ್ಮಾಣ ಸೇರಿ ಇತರೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.
ಈ ಮೂಲಕ ನಗರಸಭೆಯ 3.07 ಕೋಟಿ ರೂ. ಅನುದಾನದಲ್ಲಿ ಇಡೀ ಕವಾಡಿಗರಹಟ್ಟಿಗೆ ಹೊಸದಾಗಿ ಪೈಪ್‌ಲೈನ್ ಅಳವಡಿಕೆ, ಮನೆಗಳಿಗೆ ಹೊಸ ನಳ ಸಂಪರ್ಕ, 2.5 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್, ಹಿರೇಕಂದವಾಡಿ ನೀರು ಶುದ್ಧೀಕರಣ ಘಟಕದ ದುರಸ್ತಿ ಕಾಮಗಾರಿಗೆ ಚಾಲನೆ ದೊರೆಯಿತು.
ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯಿಂದ 16.5 ಲಕ್ಷ ರೂ. ವೆಚ್ಚದಲ್ಲಿ ಹೊಸ ಕೊಳವೆಬಾವಿ ಕೊರೆಸುವ, 1 ಸಾವಿರ ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, 5 ವರ್ಷ ಇದರ ನಿರ್ವಹಣೆಯನ್ನು ಇಲಾಖೆ ವಹಿಸಿಕೊಂಡಿದೆ.
ಇದೇ ವೇಳೆ ಸಚಿವರು ತಾತ್ಕಾಲಿಕವಾಗಿ ಆರಂಭಿಸಿರುವ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ, ಕಳೆದ 31 ದಿನಗಳಿಂದ ನಿರಂತರವಾಗಿ ಜನರಿಗೆ ಉತ್ತಮವಾಗಿ ಆರೋಗ್ಯ ಸೇವೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 300 ಜನ ಅಸ್ವಸ್ಥರು, ರಕ್ತದೊತ್ತಡ, ಮಧುಮೇಹ ಇತರೆ ಅನಾರೋಗ್ಯ ಸಮಸ್ಯೆಯುಳ್ಳ 900 ಮಂದಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಸಿಬ್ಬಂದಿ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು, ನಗರಸಭೆ ಪೌರಾಯುಕ್ತೆ ರೇಣುಕಾ ಇತರರಿದ್ದರು.