

ಚಿಕ್ಕೋಡಿ: ಗೋಟೂರ-ಕಾಗವಾಡ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಪಟ್ಟಣದಲ್ಲಿರುವ ಸಂಸದರ ಕಚೇರಿಯಲ್ಲಿ ಶನಿವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಟೂರ-ಕಾಗವಾಡ ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಲೋಕೋಪಯೋಗಿ ಸಚಿವನಾದ ನಂತರ ರಾಜ್ಯದಲ್ಲಿ ಸಾಕಷ್ಟು ರಸ್ತೆ ಸುಧಾರಣೆ ಮಾಡಲಾಗಿದೆ. ರಾಜ್ಯದ ರಸ್ತೆಗಳ ಸುಧಾರಣೆಗೆ ಇನಷ್ಟು ಪ್ರಯತ್ನಿಸಲಾಗುವುದು ಎಂದರು.
ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ತಹಸೀಲ್ದಾರ್ ಸಿ.ಎಸ್.ಕುಲಕರ್ಣಿ, ಸಿಡಿಪಿಒ ಸಂತೋಷ ಕಾಂಬಳೆ, ಮುಖಂಡರಾದ ಮಹಾವೀರ ಮೋಹಿತೆ, ಶಿವಾನಂದ ರ‍್ಯಾಯಿ, ಶಾಮ ರೇವಡೆ, ಕಿರಣ ರಜಪೂತ, ಮಹಾಂತೇಶ ಮಗದುಮ್ಮ, ರುದ್ರಪ್ಪ ಸಂಗಪ್ಪಗೋಳ ಇತರರಿದ್ದರು.
ಜಿಲ್ಲೆ ವಿಭಜನೆಗೆ ಪ್ರಯತ್ನ: ಜಿಲ್ಲೆ ವಿಭಜನೆಗೆ ಕೇಂದ್ರ ಸರ್ಕಾರ ಬರುವ ಡಿಸೆಂಬರ್ ೩೦ರವರೆಗೆ ಗಡುವು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಬೆಳಗಾವಿ ಜಿಲ್ಲೆ ವಿಭಜನೆಯಾಗಬೇಕು. ಗೋಕಾಕ ಮತ್ತು ಚಿಕ್ಕೋಡಿ ಹೊಸ ಜಿಲ್ಲೆಯಾಗಬೇಕು. ಅದಕ್ಕಾಗಿ ನಮ್ಮದು ಪ್ರಯತ್ನ ನಡೆದಿದೆ ಎಂದರು.