ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ : ನಗರಸಭೆ ಅಧ್ಯಕ್ಷೆ ಗಾಯತ್ರಿ ಬಸವರಾಜ

24_GBD_Nagarasabhe
Published on

ಗೌರಿಬಿದನೂರು: ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ನಗರಸಭೆ ಅಧ್ಯಕ್ಷೆ ಗಾಯತ್ರಿ ಬಸವರಾಜ ಸೂಚಿಸಿದರು.

ವಿವಿಧ ಬಡಾವಣೆಗಳಿಗೆ ಮಂಗಳವಾಗ ಭೇಟಿ ನೀಡಿದ ಅವರು, ಸಾರ್ವಜನಿಕರ ಸಮಸ್ಯೆ ಆಲಿಸಿ, ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಮಾನಸ ಆಸ್ಪತ್ರೆ ಬಳಿ ನೂತನವಾಗಿ ನಿರ್ಮಿಸುತ್ತಿರುವ ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು ಪರಿಶೀಲನೆ ನಡೆಸಿ, ಕಾಮಗಾರಿ ವೇಳೆ ಅಭಿಯಂತ ಖುದ್ದು ಸ್ಥಳದಲ್ಲಿರಬೇಕು, ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.ಹಂದಿಗಳ ಕಾಟಕ್ಕೆ ಕಡಿವಾಣ, ಬೀದಿದೀಪ, ಸ್ವಚ್ಛತೆಗೆ ಆದ್ಯತೆ, ರಸ್ತೆಗಳ ಅಭಿವೃದ್ಧಿ ಪಡಿಸುವಂತೆ ಸಾರ್ವಜನಿಕರು ಮನವಿ ಮಾಡಿದರು.

ನಗರದ ಸ್ವಚ್ಛತೆ ದೃಷ್ಠಿಯಿಂದ ಮಾದರಿ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ನಗರಸಭೆ ಸೂಚನೆಗಳನ್ನು ಪಾಲಿಸುವ ಮೂಲಕ ಸ್ವಚ್ಛತೆ ಕಾಪಾಡಲು ಜನರು ಸಹಕರಿಸಬೇಕು ಹಾಗೂ ಸಕಾಲದಲ್ಲಿ ತೆರಿಗೆ ಪಾವತಿಸುವಂತೆ ಆಯುಕ್ತ ಜಿ.ಎನ್.ಚಲಪತಿ ಮನವಿ ಮಾಡಿದರು.

ನಗರಸಭೆ ಸದಸ್ಯರಾದ ಮುಮೀನ್ ತಾಜ್, ರಫೀಕ್, ಶ್ರೀಕಾಂತ್, ರಾಜಕುಮಾರ್, ಮಂಜುಳಾ, ಎಇಇ ಸುಭಾಷ್ ಕಂಬಳಿ, ಅಭಿಯಂತ ಚಕ್ರಪಾಣಿ, ಕಂದಾಯ ನಿರೀಕ್ಷಕ ಸಂತೋಷ್, ಆರೋಗ್ಯ ನಿರೀಕ್ಷಕ ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net