ಕಾಮಗಾರಿಗಳ ವೀಕ್ಷಣೆ, ಗುಣಮಟ್ಟಕ್ಕೆ ಸೂಚನೆ

Published on

ಚಾಮರಾಜನಗರ: ನಗರಸಭೆ ಪೌರಾಯುಕ್ತ ರಾಮದಾಸ್‌ಗೆ ಕಡ್ಡಾಯ ರಜೆ ಕೊಟ್ಟು ಕಳುಹಿಸಿರುವ ಜಿಲ್ಲಾಧಿಕಾರಿ ಶಿಲ್ಪಾನಾಗ್ ಬುಧವಾರ ಖುದ್ದಾಗಿ ನಗರ ಪ್ರದಕ್ಷಿಣೆ ಹಾಕಿ ವಿವಿಧ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಗುಣಮಟ್ಟ ಕಾಯ್ದುಕೊಳ್ಳಲು ಸೂಚನೆ ನೀಡಿದರು.

ಪೌರಾಯುಕ್ತರ ಜವಾಬ್ದಾರಿಯುತ ಹುದ್ದೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ರಾಮದಾಸ್ (ಮೂಲ ಹುದ್ದೆ ಸಹಾಯಕ ತೋಟಗಾರಿಕೆ ಅಧಿಕಾರಿ, ತೋಟಗಾರಿಕೆ ಇಲಾಖೆ) ವಿಲರಾಗಿದ್ದಾರೆಂದು ಕರ್ತವ್ಯದಿಂದ ಕಡ್ಡಾಯ ರಜೆಯ ಮೇಲೆ ತೆರಳಲು ಸೋಮವಾರ ಆದೇಶ ಹೊರಡಿಸಿದ್ದರು. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಾಶ್ ಅವರನ್ನು ಪೌರಾಯುಕ್ತ ಹುದ್ದೆಗೆ ಪ್ರಭಾರವಾಗಿ ನಿಯೋಜಿಸಿದ್ದರು. ಈ ಬೆಳವಣಿಗೆಯ ಬಳಿಕ ನಗರದ ಪ್ರಮುಖ ಕಡೆಗಳಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎಲ್ಲೆಲ್ಲಿ ಯಾವ ಕಾಮಗಾರಿ ಪರಿಶೀಲನೆ:

ನಗರಸಭೆ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ-4 ಯೋಜನೆಯಡಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಡಿಸಿ ಶಿಲ್ಪಾನಾಗ್ ಪರಿಶೀಲನೆ ನಡೆಸಿದರು. 69.31 ಲಕ್ಷ ರೂ. ಅಂದಾಜು ವೆಚ್ಚದ ತಿಬ್ಬಳ್ಳಿಕಟ್ಟೆಯಿಂದ ಕರಿನಂಜನಪುರದವರೆಗಿನ ರಸ್ತೆ ಅಭಿವೃದ್ಧಿ, 25.89 ಲಕ್ಷ ರೂ. ಅಂದಾಜು ವೆಚ್ಚದ ವಾರ್ಡ್ ನಂ.31ರ ಕುರುಬರ ಬೀದಿಯಿಂದ ಪೊಲೀಸ್ ಠಾಣೆಯ ರಸ್ತೆಯ ಅಭಿವೃದ್ಧಿ, 18.88 ಲಕ್ಷ ರೂ. ಅಂದಾಜು ವೆಚ್ಚದ ಪ್ರಶಾಂತ್ ನಗರ ರಸ್ತೆ ಮತ್ತು ದುರ್ಗಿಗುಡಿ ಬೀದಿಯ ರಸ್ತೆ ಅಭಿವೃದ್ಧಿ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. ಪೂರ್ಣಗೊಂಡಿರುವ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು.

ಗುಣಮಟ್ಟಕ್ಕೆ ಸೂಚನೆ:

ವಿವಿಧ ಕಾಮಗಾರಿಗಳ ಪರಿಶೀಲನೆ ವೇಳೆ ಉಪಸ್ಥಿತರಿದ್ದ ಅಧಿಕಾರಿಗಳಿಗೆ ತಾಂತ್ರಿಕ ಮಾನದಂಡಗಳಿಗೆ ಅನುಗುಣವಾಗಿ ಗುಣಮಟ್ಟದ ಕಾಮಗಾರಿಗಳನ್ನು ನಡೆಸಲು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚನೆ ನೀಡಿದರು. ನಿಗದಿತ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸುಧಾ, ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ, ಪರಿಸರ ಇಂಜಿನಿಯರ್ ರೂಪಾ, ಆರೋಗ್ಯ ನಿರೀಕ್ಷ ಮಂಜು, ಕನ್‌ಸಲ್ಟೆಂಟ್ಸ್ ಪ್ರತಿನಿಧಿಗಳು ಮತ್ತು ಗುತ್ತಿಗೆದಾರರು ಉಪಸ್ಥಿತರಿದ್ದರು.

ಅಧಿಕಾರ ವಹಿಸಿಕೊಂಡ ಪ್ರಕಾಶ್:

ನಗರಸಭೆ ಪ್ರಭಾರ ಪೌರಾಯುಕ್ತರಾಗಿ ಪ್ರಕಾಶ್ ಬುಧವಾರ ಅಧಿಕಾರವಹಿಸಿಕೊಂಡರು. ಈ ಹಿಂದಿನ ಪೌರಾಯುಕ್ತ ರಾಮದಾಸ್ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ಪ್ರಭಾರ ಜವಾಬ್ದಾರಿ ನೀಡಿರುವ ಹಿನ್ನೆಲೆಯಲ್ಲಿ ಪ್ರಕಾಶ್ ಪೌರಾಯುಕ್ತರಾಗಿ ಕೆಲಸ ಶುರು ಮಾಡಿದ್ದಾರೆ. ಬುಧವಾರ ಜಿಲ್ಲಾಧಿಕಾರಿ ಶಿಲ್ಪಾನಾಗ್ ನಗರದ ಕೆಲವು ಕಾಮಗಾರಿಗಳನ್ನು ವೀಕ್ಷಣೆ ಮಾಡಿದ ಸಂದರ್ಭದಲ್ಲಿ ಪ್ರಭಾರ ಪೌರಾಯುಕ್ತ ಪ್ರಕಾಶ್ ಹಾಜರಿದ್ದು ಡಿಸಿ ಸೂಚನೆಗಳನ್ನು ಪಾಲಿಸುವುದಾಗಿ ತಿಳಿಸಿದರು.

ಬೇಗ ಕಾಮಗಾರಿ ಮುಗಿಸಲು ಸೂಚನೆ:

ದಸರಾ ಮುಗಿದ ಬಳಿಕ ವಿವಿಧ ಕಾಮಗಾರಿಗಳು ಶುರುವಾಗಲಿರಲಿಲ್ಲ. ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದವು. ಕೆಲವು ಕಡೆಗಳಲ್ಲಿ ಬಿಲ್ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರೊಂದಿಗೆ ಕಾಮಗಾರಿಗಳ ಪರಿಶೀಲನೆ ನಡೆಸಿದೆವು. ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳನ್ನು ಪರಿಶೀಲನೆ ಮಾಡಲಾಯಿತು ಎಂದು ನಗರಸಭೆ ಅಧ್ಯಕ್ಷ ಸುರೇಶ್ ತಿಳಿಸಿದರು.

ಕಾಮಗಾರಿ ಪೂರ್ಣಗೊಳಿಸಲು ಒತ್ತಾಯ:

ಹಲವು ವರ್ಷಗಳೇ ಕಳೆಯುತ್ತಿದ್ದರೂ ನಗರದ ಕೋರ್ಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆ ನಿರ್ಮಾಣಕ್ಕೆ ಕಲ್ಲು ಹಾಕಿ ಡಾಂಬರೀಕರಣ ಮಾಡದೆ ಇರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net