ಕಾಮಗಾರಿಗಳ ವಿಳಂಬಕ್ಕೆ ಆಕ್ರೋಶ

DMF
Published on

ಚಿತ್ರದುರ್ಗ: ಜಿಲ್ಲೆಯ ಹಲವೆಡೆ ಶಾಲೆ, ಕೊಠಡಿ, ಶೌಚಗೃಹ, ಅಂಗನವಾಡಿ ಕಟ್ಟಡ, ವಸತಿನಿಲಯ, ಆರ್‌ಒ ಘಟಕಗಳ ನಿರ್ಮಾಣ ಸೇರಿ ಮೂಲಸೌಕರ್ಯ ಕಲ್ಪಿಸಬೇಕಾದ ಸಾಕಷ್ಟು ಕಾಮಗಾರಿಗಳು ಸ್ಥಗಿತಗೊಂಡು ಆರೆಂಟು ತಿಂಗಳಾಗಿವೆ. ವಿಳಂಬ ಧೋರಣೆ ಸರಿಯಲ್ಲ. ಇನ್ನೂ ಎಷ್ಟು ವರ್ಷ ಬೇಕು ಪೂರ್ಣಗೊಳಿಸಲು…

ಮಂಗಳವಾರ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ನ ಆಡಳಿತ ಮಂಡಳಿ ಸಭೆಯಲ್ಲಿ ಶಾಸಕರಾದ ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ಎಂಎಲ್ಸಿ ಕೆ.ಎಸ್.ನವೀನ್ ನಿರ್ಮಿತಿ ಕೇಂದ್ರದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಪರಿ ಇದು.

ಸಚಿವ ಡಿ.ಸುಧಾಕರ್ ಮಾತನಾಡಿ, ಡಿಎಂಎಫ್‌ನಡಿ ಪ್ರಸ್ತುತ 115 ಕೋಟಿ ರೂ. ಸಂಗ್ರಹವಾಗಿದ್ದು, 2023ರವರೆಗೂ ಮಂಜೂರಾಗಿ ಈಗಾಗಲೇ ಪ್ರಗತಿಯಲ್ಲಿರುವ ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಇನ್ನೂ ಆರಂಭವಾಗದ ಕಾಮಗಾರಿಗಳ ಮತ್ತು ನಿಗದಿತ ಅನುದಾನದ ವಿವರ ಸಲ್ಲಿಸಿ, ಆಯಾ ಕ್ಷೇತ್ರದ ಶಾಸಕರ ಗಮನಕ್ಕೂ ತನ್ನಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಿರ್ಮಿತಿ ಕೇಂದ್ರಕ್ಕೆ ಮೂರ‌್ನಾಲ್ಕು ವರ್ಷದಿಂದ ಈವರೆಗೂ ಒಟ್ಟು 82.02 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗಳಿಗಾಗಿ 78 ಕೋಟಿ ರೂ. ಖರ್ಚು ಮಾಡಲಾಗಿದೆ. ಇನ್ನೂ 17.7 ಕೋಟಿ ರೂ. ಅನುದಾನದ ಅಗತ್ಯವಿದೆ ಎಂದು ಅಧಿಕಾರಿ ಸಭೆಗೆ ತಿಳಿಸಿದರು.

ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಮಾತನಾಡಿ, ಅನುದಾನದ ಕೊರತೆ ಇಲ್ಲ. ಆದರೆ, ಭೌತಿಕ, ಆರ್ಥಿಕವಾಗಿ ನಿರ್ಮಿತಿ ಕೇಂದ್ರದವರು ಕೈಗೊಂಡ ಕಾಮಗಾರಿಗಳು ಮ್ಯಾಚ್ ಆಗುತ್ತಿಲ್ಲ. 2 ಸಾವಿರಕ್ಕೂ ಅಧಿಕ ಕಾಮಗಾರಿಗಳಿದ್ದು, ಯಾವ ಹಂತದಲ್ಲಿವೆ ಎಂಬ ವಿವರ ನೀಡಿದರೆ, ಅನುದಾನ ಬಿಡುಗಡೆಗೆ ಸಹಕಾರಿಯಾಗಲಿದೆ ಎಂದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಮಹೇಶ್ ಮಾತನಾಡಿ, ಗಣಿಬಾಧಿತ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ವಿವಿಧ ಇಲಾಖೆಗೆ ಸಂಬಂಧಿಸಿದ 2023ರವರೆಗಿನ ಹಲವು ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿವೆ. ಈಗ ಸಂಗ್ರಹವಿರುವ 115 ಕೋಟಿಯಲ್ಲಿ ಕಳೆದ 3 ವರ್ಷಗಳ ಅವಧಿಯ, ಮುಂದುವರೆದ ಕಾಮಗಾರಿ ಪೂರ್ಣಗೊಳಿಸಲು ಇನ್ನೂ 100 ಕೋಟಿ ರೂ. ಅಗತ್ಯವಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್ ಮಾತನಾಡಿ, 20 ದಿನದೊಳಗೆ ಮಂಜೂರಾದ ಎಲ್ಲ ಆರ್‌ಒ ಘಟಕಗಳನ್ನು ನಿರ್ಮಿಸಲಾಗುವುದು ಎಂದರು.

ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಬಿ.ಜಿ.ಗೋವಿಂದಪ್ಪ, ಜಿಪಂ ಸಿಇಒ ಸೋಮಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net