

ಮೈಸೂರು: ಬಾಕಿ ಉಳಿಸಿಕೊಂಡಿರುವ ಕಾಮಗಾರಿಗಳ ಹಣ ಬಿಡುಗಡೆ ಮಾಡಲಾಗುವುದು ಎಂದು ಮೇಯರ್ ಶಿವಕುಮಾರ್ ತಿಳಿಸಿದರು.
ಪಾಲಿಕೆ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ನಗರಪಾಲಿಕೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಗುತ್ತಿಗೆದಾರರ ಸಭೆ ನಡೆಸಿ ಮಾತನಾಡಿದ ಅವರು, ನಗರದ ವಿವಿಧ ಕಡೆಗಳಲ್ಲಿ ರಸ್ತೆ ರಿಪೇರಿ, ಡಾಂಬರೀಕರಣ ಇನ್ನಿತರ ಕಾಮಗಾರಿಗಳನ್ನು ನಿರ್ವಹಿಸಿರುವ ಗುತ್ತಿಗೆದಾರರಿಗೆ ನೀಡುವ ಹಣ ಬಾಕಿ ಇದೆ. ಇದನ್ನು ಬಿಡುಗಡೆ ಮಾಡಲಾಗುವುದು ಎಂದರು.
ದಸರಾ ಮಹೋತ್ಸವ, ಮಳೆಗಾಲ ಕಳೆದ ನಂತರ ಕೈಗೆತ್ತಿಕೊಂಡಿರುವ ಕಾಮಗಾರಿಗಳು ಪೂರ್ಣ ಮುಗಿದಿದ್ದು, ಇನ್ನೂ 60ರಿಂದ 70 ಕೋಟಿ ರೂ. ಗುತ್ತಿಗೆದಾರರಿಗೆ ಕೊಡಬೇಕಿದೆ. ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತಿದ್ದು, ಉಳಿದ ಕಾಮಗಾರಿಗಳನ್ನು ಮುಗಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಕಳೆದ ವರ್ಷ ಗುತ್ತಿಗೆದಾರರಿಗೆ ನೀಡಬೇಕಾಗಿದ್ದ ಬಾಕಿ ಹಣ ಬಹಳಷ್ಟು ಇತ್ತು. ಸರ್ಕಾರ ಬಿಡುಗಡೆ ಮಾಡಿದ ತಕ್ಷಣವೇ ಮಂಜೂರು ಮಾಡಿದ್ದರಿಂದ ಬಾಕಿ ಮೊತ್ತ ಕಡಿಮೆಯಾಗಿದೆ ಎಂದರು.
ಇಎಂಡಿ ಹಣ ಸಕಾಲಕ್ಕೆ ವಾಪಸ್ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಬೇರೆ ಕಾಮಗಾರಿಗಳ ಟೆಂಡರ್‌ಗೆ ಇಎಂಡಿ ಹಣ ಕಟ್ಟಲು ಕಷ್ಟವಾಗುತ್ತಿದೆ. ಆದ್ದರಿಂದ ಟೆಂಡರ್ ಸಿಗದಿದ್ದಲ್ಲಿ ಒಂದು ವಾರದೊಳಗೆ ಇಎಂಡಿ ಹಣ ಮರು ಪಾವತಿಸಲು ಗಮನಹರಿಸಬೇಕು ಎಂದು ಗುತ್ತಿಗೆದಾರರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿ ಮೇಯರ್, ಇ-ಟೆಂಡರ್‌ನಲ್ಲಿ ಗುತ್ತಿಗೆದಾರನಿಗೆ ಕೆಲಸ ಸಿಗದಿದ್ದಲ್ಲಿ ತಕ್ಷಣವೇ ವಾಪಸ್ ಕೊಡುವುದಕ್ಕೆ ಕ್ರಮ ಕೈಗೊಳ್ಳುವಂತೆ ಎಸ್‌ಇ ಮಹೇಶ್ ಅವರಿಗೆ ಸೂಚಿಸಿದರು.
ಉಪ ಮೇಯರ್ ಡಾ.ಜಿ.ರೂಪಾ, ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಸದಸ್ಯರಾದ ಅಯೂಬ್ ಖಾನ್, ಅಶ್ವಿನಿ ಅನಂತು ಇನ್ನಿತರರು ಇದ್ದರು.