ಕಾಮಗಾರಿ ಸ್ಥಗಿತಗೊಂಡರೆ ಭದ್ರೆಗೆ ಹಿನ್ನಡೆ

CTD BADRA STRIKE-MP
Published on

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಆಗ್ರಹಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯು ಎದ್ದೇಳು ಜನಸೇವಕ ಹೆಸರಿನಡಿ ಜನಪ್ರತಿನಿಧಿಗಳ ಮನೆ ಮುಂದೆ ಆಯೋಜಿಸಿರುವ ತಮಟೆ ಚಳವಳಿ ಸಂಸದ ಗೋವಿಂದ ಎಂ.ಕಾರಜೋಳ ನಿವಾಸದ ಬಳಿ ಗುರುವಾರ ಆರಂಭವಾಯಿತು.
ಭದ್ರಾ ಯೋಜನೆಗೆ ಅಗತ್ಯ ಅನುದಾನ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಜಿಲ್ಲೆಯ ಜನಪ್ರತಿನಿಧಿಗಳ ನಿವಾಸಗಳ ಎದುರು ಚಳವಳಿ ನಡೆಸಿ ಅವರನ್ನು ಎಚ್ಚರಿಸಲು ಹೋರಾಟ ಸಮಿತಿ ಈ ಮೂಲಕ ಮುಂದಾಗಿದೆ.
ವಿ.ಪಿ.ಬಡಾವಣೆ ಸರ್ಕಾರಿ ಪ್ರಾಥಮಿಕ ಶಾಲೆಯಿಂದ-ಜೆಸಿಆರ್ ಬಡಾವಣೆಯಲ್ಲಿರುವ ಸಂಸದರ ನಿವಾಸದವರೆಗೆ ಮೆರವಣಿಗೆ ಮೂಲಕ ತೆರಳಿ ಧರಣಿ ನಡೆಸಿದರು.
ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಬಿಲ್ ಪಾವತಿಸದ ಕಾರಣ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಈ ಸಂಬಂಧ ವಿಶ್ವೇಶ್ವರಯ್ಯ ಜಲನಿಗಮದ ಮುಖ್ಯ ಇಂಜಿನಿಯರ್‌ಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ ಎಂದರು.
ಗುತ್ತಿಗೆದಾರರನ್ನು ಉಳಿಸಿಕೊಳ್ಳುವ ಪ್ರಯತ್ನ ಕಾಣಿಸುತ್ತಿಲ್ಲ.ಕಾಮಗಾರಿ ಸ್ಥಗಿತವಾದರೆ ಯೋಜನೆಗೆ ಮತ್ತಷ್ಟು ಹಿನ್ನಡೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
2 ಸಾವಿರ ಕೋಟಿ ರೂ. ಬಿಲ್ ಬಾಕಿ ಕಾರಣಕ್ಕೆ ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ. ಎತ್ತಿನಹೊಳೆಗೆ ನೀಡುತ್ತಿರುವ ಆದ್ಯತೆಯನ್ನು ರಾಜ್ಯ ಸರ್ಕಾರ ಭದ್ರೆಗೆ ನೀಡುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಗುತ್ತಿಗೆದಾರರನ್ನು ಉಳಿಸಿಕೊಳ್ಳುವ ಜತೆಗೆ ಕೂಡಲೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಮೂರು ತಿಂಗಳ ಹಿಂದೆ ಭೇಟಿ ನೀಡಿ ಅಬ್ಬಿನಹೊಳಲು ಬಳಿ ಕಾಲುವೆ ನಿರ್ಮಾಣ ಪೂರ್ಣಗೊಳಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ತಾಕೀತು ಮಾಡಿದ್ದರೂ ಆಗಿಲ್ಲ ಎಂದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ಸಿ.ಸುರೇಶ್‌ಬಾಬು ಮಾತನಾಡಿ, ಯೋಜನೆ ಕಾಮಗಾರಿ ಆರಂಭವಾಗಿ 17 ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಜನರ ತಾಳ್ಮೆ ಪರೀಕ್ಷಿಸಲು ಹೊರಟರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ. ಸರ್ಕಾರಗಳು ಅನುದಾನ ಬಿಡುಗಡೆಗೆ ಕ್ರಮ ವಹಿಸಲು ಆಗ್ರಹಿಸಿದರು.
ಸರ್ವೋದಯ ಕರ್ನಾಟಕ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮಾತನಾಡಿ,ಈ ಯೋಜನೆ ರಾಜಕೀಯ ದಾಳ ಆಗುವುದು ಬೇಡ. ರಾಜ್ಯದ ಇತರೆ ನೀರಾವರಿ ಯೋಜನೆಗಳಿಗೆ ದೊರೆತ ಗಮನ ಭದ್ರೆಗೆ ಸಿಕ್ಕಿಲ್ಲ ಎಂದರು. ರೈತ ಸಂಘದ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮತ್ತಿತರರು ಮಾತನಾಡಿದರು.
ರೈತಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ, ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ಮುಖಂಡರಾದ ಕೆ.ಆರ್.ದಯಾನಂದ್, ಬಸ್ತಿಹಳ್ಳಿ ಸುರೇಶ ಬಾಬು, ಕೆ.ಸಿ.ಹೊರಕೇರಪ್ಪ, ಕೆ.ಟಿ.ಶಿವಕುಮಾರ್, ಶಿವರುದ್ರಪ್ಪ, ದೊಡ್ಡಉಳ್ಳಾರ್ತಿ ಕರಿಯಣ್ಣ, ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬ್ಯಾಡರಹಳ್ಳಿ ಶಿವಕುಮಾರ್, ಚೇತನ್ ಯಳನಾಡು, ಜಾನುಕೊಂಡ ತಿಪ್ಪೇಸ್ವಾಮಿ, ಸಿದ್ದೇಶ್, ಪ್ರಭು, ನಾಗಣ್ಣ, ಚಿದಾನಂದ, ಶೇಖರ್, ಲಕ್ಷ್ಮಣರೆಡ್ಡಿ, ಸುಜಾತಾ, ಸಾವಿತ್ರಮ್ಮ, ಇದ್ದರು.

*ಹೋರಾಟಕ್ಕೆ ಸಂಸದ ಕಾರಜೋಳ ಬೆಂಬಲ
ಯೋಜನೆಗೆ ಈ ವರೆಗೆ 9500 ಕೋಟಿ ರೂ. ಖರ್ಚಾಗಿದೆ. ಇದರಲ್ಲಿ 5500 ಕೋಟಿ ರೂ.ಗಳನ್ನು ಬಿಜೆಪಿ ಸರ್ಕಾರ ಭರಿಸಿದೆ. ಬಿಜೆಪಿ ಬದ್ಧತೆಯನ್ನು ಉಳಿದ ಸರ್ಕಾರಗಳು ಪ್ರದರ್ಶಿಸಿಲ್ಲ ಎಂದು ಸಂಸದ ಗೋವಿಂದ ಎಂ.ಕಾರಜೋಳ ದೂರಿದರು. ಕೇಂದ್ರದಿಂದ 5300 ಕೋಟಿ ರೂ. ಬಿಡುಗಡೆಯಾಗಲಿದೆ. ಸಿಎಂ ಸಿದ್ದರಾಮಯ್ಯ ಅವರು ಬಿಲ್ ಪಾವತಿಗೆ ಕ್ರಮವಹಿಸುವಂತೆ ಒತ್ತಾಯಿಸಿದ ಸಂಸದರು, ಹೋರಾಟಕ್ಕೆ ತಮ್ಮ ಬೆಂಬಲ ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net