

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಯಲ್ಲಮ್ಮದೇವಿ ದೇವಸ್ಥಾನದ ಸುತ್ತ ಹಾಗೂ ಗುಂಡದಖೋಡಿ ತೋಟದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ನರೇಗಾ ಹಾಗೂ ೧೫ನೇ ಹಣಕಾಸು ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವೀಂದ್ರ ಬಂಗಾರೆಪ್ಪನವರ ಶನಿವಾರ ಪರಿಶೀಲಿಸಿದರು.
ಯಲ್ಲಮ್ಮದೇವಿ ಭಕ್ತರಿಗಾಗಿ ನಿರ್ಮಿಸಲಾದ ಸ್ನಾನದ ಹೊಂಡದಲ್ಲಿ ಸಂಗ್ರಹಗೊಂಡ ಪಾಚಿ ಹಾಗೂ ಗುಂಡದಖೋಡಿ ತೋಟದ ಕನ್ನಡ ಶಾಲೆಯ ಆವರಣದಲ್ಲಿ ನಿರ್ಮಿಸಿದ ಕಳಪೆ ಗುಣಮಟ್ಟದ ತಡೆಗೋಡೆ ಕಂಡು ಆಕ್ರೋಶಗೊಂಡರು. ಸ್ಥಳದಲ್ಲೇ ತಾಪಂ ಇಒ ಶಿವಾನಂದ ಕಲ್ಲಾಪುರ ಅವರನ್ನು ದೂರವಾಣಿ ಮೂಲಕ ಹಾಗೂ ಗ್ರಾಪಂ ಅಧಿಕಾರಿಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು. ಕೊಳಚೆ ನೀರು ನಿಲ್ಲದಂತೆ ನಿಗಾವಹಿಸಬೇಕು. ಶಾಲೆ ತಡೆಗೋಡೆಯನ್ನು ಗುತ್ತಿಗೆದಾರರಿಂದ ಪುನಃ ನಿರ್ಮಿಸಿಕೊಳ್ಳಬೇಕು ಎಂದು ಸೂಚಿಸಿದರು. ಇನ್ಮುಂದೆ ಕೈಗೊಳ್ಳುವ ಕಾಮಗಾರಿಗಳು ಕಳಪೆಯಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಾಪಂ ನರೇಗಾ ಅಧಿಕಾರಿ ಮೈಬುಬ್ ಖೋತವಾಲ್, ಅಭಿಯಂತ ವಿಶ್ವನಾಥ ಮಠಗಾರ, ಪಿಡಿಒ ಸಿದ್ದಪ್ಪ ತುಂಗಳ, ಹನುಮಂತ ಮಾದರ ಇತರರಿದ್ದರು.