

ಧಾರವಾಡ: ಮಹಾನಗರ ಪಾಲಿಕೆ ವ್ಯಾಪ್ತಿಯ ನಾಗರಿಕರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ವಿವಿಧ ನಗರಾಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅಧಿಕಾರಿಗಳು ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಕಳಪೆ ಗುಣಮಟ್ಟ, ಅವ್ಯವಹಾರ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ, ಜಲಮಂಡಳಿ ಮತ್ತು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಕಾಮಗಾರಿಗಳ ಕುರಿತು ಸೋಮವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಪಾಲಿಕೆಗೆ ಬಿಡುಗಡೆಯಾದ ಅನುದಾನ, ಅನುಮೋದಿತ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ನಗರೋತ್ಥಾನ ಯೋಜನೆ, ಎಸ್ಎಫ್ಸಿ ಅನುದಾನ, 14ನೇ ಹಣಕಾಸು ಯೋಜನೆಯ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಪೌರ ಕಾರ್ವಿುಕರ ಗೃಹಭಾಗ್ಯ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ಕಾರ್ವಿುಕರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕು. ಅಮೃತ ಯೋಜನೆ, ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.
ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಮಳೆಗಾಲ ಆರಂಭವಾಗಿರುವುದರಿಂದ ನಗರ ಪ್ರದೇಶದಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ಮುಖ್ಯವಾಗಿ ರಸ್ತೆ, ಒಳಚರಂಡಿ ಹಾಗೂ ಸೇತುವೆ ನಿರ್ವಣದ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಎಂದರು.
ಪಾಲಿಕೆ ಕಾಮಗಾರಿಗಳ ಕುರಿತು ಆಯುಕ್ತ ಡಾ. ಸುರೇಶ ಇಟ್ನಾಳ, ಜಲಮಂಡಳಿ ಕಾಮಗಾರಿಗಳ ಕುರಿತು ಮುಖ್ಯ ಇಂಜಿನಿಯರ್ ಜಿ.ಎಂ. ಮಾದೇಗೌಡ, ಸ್ಮಾರ್ಟ್ ಸಿಟಿ ಯೋಜನೆಯ ಪ್ರಗತಿ ಕುರಿತು ಪ್ರಧಾನ ವ್ಯವಸ್ಥಾಪಕ ಶಕೀಲ್ಅಹ್ಮದ್, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆಗಳ ಕುರಿತು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಗತಿ ವರದಿ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರದೀಪ್ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ರಾಜ್ಯ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಕಾವೇರಿ ಬಿ.ವಿ. ಇದ್ದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಯ ನಂತರ ನಗರದ ವಿವಿಧೆಡೆ ಸಂಚರಿಸಿದ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು, ಕೆಲ ಕಾಮಗಾರಿಗಳನ್ನು ಪರಿಶೀಲಿಸಿದರು. ಇಲ್ಲಿನ ಕೇಶವ ನಗರದಲ್ಲಿ ಜಲಮಂಡಳಿಯಿಂದ ಕೈಗೊಂಡಿರುವ ಒಳಚರಂಡಿ ಕಾಮಗಾರಿ ವೀಕ್ಷಿಸಿದ ಅವರು, ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಕೇಶವನಗರದ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಇನ್ನೆರಡು ದಿನಗಳಲ್ಲಿ ಕಾಮಗಾರಿ ಸರಿಪಡಿಸಬೇಕು. ಈ ಕುರಿತು ವಾಟ್ಸಾಪ್ ಮೂಲಕ ಫೋಟೋಗಳನ್ನು ಕಳುಹಿಸಬೇಕು ಎಂದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ನಂತರ ಟೋಲ್ನಾಕಾ ಹತ್ತಿರದ ಬಿಆರ್ಟಿಎಸ್ ರಸ್ತೆಯ ಪಕ್ಕದ ಕಾಮಗಾರಿ ಪರಿಶೀಲಿಸಿದರು. ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.