ಕಾಫಿಗೆ ಕೊಳೆರೋಗ, ಪರಿಹಾರ ಕೊಡಿಸಿ; ಪ್ಲಾಂಟರ್ಸ್ ಸಂಘದ ಕಾರ್ಯದರ್ಶಿ ಟಿ.ಪಿ. ಸುರೇಂದ್ರ ಮನವಿ

T.P. SURENDHRA
Published on

ಹಾಸನ: ಮಳೆಯಿಂದ ಕಾಫಿ ಬೆಳೆಗೆ ಕೊಳೆರೋಗ ಉಂಟಾಗಿದ್ದು, ಕಾಫಿ ಮಂಡಳಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಕರ್ನಾಟಕ ಪ್ಲಾಂಟರ್ಸ್ ಸಂಘದ ಕಾರ್ಯದರ್ಶಿ ಟಿ.ಪಿ. ಸುರೇಂದ್ರ ಮನವಿ ಮಾಡಿದರು.

ಈ ವರ್ಷದ ಮೇ ತಿಂಗಳ ಕೊನೆಯ 10 ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದ ನಿರಂತರವಾಗಿ ಸುರಿದ ಅಕಾಲಿಕ ಮಳೆಯು ಕಾಫಿ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಮಲೆನಾಡಿನಲ್ಲಿ ಜೂ.15ರಿಂದ ವಾಡಿಕೆಯಂತೆ ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದು, ದುರಾದೃಷ್ಟವಶಾತ್ ಈ ವರ್ಷ ಮೇ ತಿಂಗಳಿನಿಂದಲೇ ಮಳೆ ಪ್ರಾರಂಭಗೊಂಡಿದ್ದರಿಂದ ಕಾಫಿ ಬೆಳೆಗಾರರು ಕಾಫಿ ತೋಟಗಳಲ್ಲಿ ಸಕಾಲದಲ್ಲಿ ಸಮರ್ಪಕವಾದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಳೆದ 35-40 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಹಾಗೂ ಶೀತ ವಾತಾವರಣದಿಂದ ಕಾಫಿ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ವಾಡಿಕೆಗಿಂತ ಈ ಬಾರಿ ಹೆಚ್ಚು ಮಳೆಯಾಗಿದ್ದು ಅದರಲ್ಲೂ ಅಕಾಲಿಕ ಮಳೆಯು ಕಾಫಿ ಬೆಲೆಗೆ ಮಾರಕವಾಗಿ ಪರಿಣಮಿಸಿದೆ. ಈಗಾಗಲೇ ಕಾಫಿ ಬೆಳೆಯಲ್ಲಿ ಉಂಟಾಗಿರುವ ನಷ್ಟದ ಬಗ್ಗೆ ಸಮೀಕ್ಷೆ ನೆಡೆಸುವಂತೆ ಬೆಳೆಗಾರ ಸಂಘಟನೆಗಳಿಂದ ಕಾಫಿ ಮಂಡಳಿ ಮತ್ತು ಕಂದಾಯ ಇಲಾಖೆಯನ್ನು ಗಮನ ಸೆಳೆಯಲಾಗಿದೆ ಎಂದರು.

ಒಟ್ಟಾರೆ ವಾಡಿಕೆಗಿಂತ ಒಂದು ತಿಂಗಳು ಮುಂಚಿತವಾಗಿಯೇ ಅಕಾಲಿಕ ಮಳೆ ಪ್ರಾರಂಭವಾಗಿದ್ದರಿಂದ ಶೇಕಡ 90 ಕ್ಕಿಂತಲೂ ಹೆಚ್ಚಿನ ಬೆಳೆಗಾರರು ಆಯಾ ಕಾಲಘಟ್ಟಕ್ಕೆ ತಕ್ಕಂತೆ ನಿರ್ವಹಿಸಬೇಕಾದ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗಿರುವುದಿಲ್ಲ. ಈ ವರ್ಷ ಈಗಾಗಲೇ ಕೇವಲ 25 ದಿನಗಳಲ್ಲಿ ವಾರ್ಷಿಕ ವಾಡಿಕೆ ಮಳೆಯಲ್ಲಿ ಶೇಕಡ 50 ರಷ್ಟು ಹೆಚ್ಚು ಮಳೆಯಾಗಿರುವುದು ಗಮನಾರ್ಹ. ಅತಿಯಾದ ಮಳೆಯಿಂದ ಕಾಫಿ ಬೆಳೆಯಲ್ಲಿ ಕೊಳೆರೋಗ ಉಂಟಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಕಾಫಿ ನೆಲಕ್ಕೆ ಉದುರುತ್ತಿದೆ. ಇದರ ಬಗ್ಗೆ ಕಾಫಿ ಮಂಡಳಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನೆಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಉಂಟಾಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಎ.ಎಸ್. ಪರಮೇಶ್, ಗೌರವ ಕಾರ್ಯದರ್ಶಿ ಕೆ.ಬಿ. ಲೋಕೇಶ್, ಖಜಾಂಚಿ ಎಂ.ಜೆ. ಸಚಿನ್, ಮೇಘರಾಜು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net