

ಹಾಸನ: ಹಲವು ವರ್ಷಗಳ ಹೋರಾಟದ ಫಲವಾಗಿ ಸರ್ಕಾರ ಕಾಫಿ ಬೆಳೆಗಾರರು ಸಾಗುವಳಿ ಮಾಡಿಕೊಂಡು ಭೂಮಿಯನ್ನು ಗುತ್ತಿಗೆ ನೀಡಲು ಅರ್ಜಿ ಆಹ್ವಾನಿಸಿರುವ ಮುಖ್ಯಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ಸಚಿವರಿಗೆ ಒಕ್ಕೂಟದ ಪರವಾಗಿ ಅಭಿನಂದನೆ ಸಲ್ಲಿಸಲಾಗುವುದು ಎಂದು ಕರ್ನಾಟ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ.ಹೆಚ್.ಟಿ.ಮೋಹನ್ ಕುಮಾರ್‌ಹೇಳಿದರು.
ಸ್ವತಂತ್ರ ಪೂರ್ವದಿಂದಲೂ ಕಾಫಿ ಬೆಳೆಗಾರರು ಸರ್ಕಾರಿ ಭೂಮಿಯಲ್ಲಿ ಪ್ಲಾಂಟೇಶನ್ ಬೆಳೆಗಳನ್ನು ಬೆಳೆಯುತ್ತಾ ಅನಧಿಕೃತವಾಗಿ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಪರಿಸರಕ್ಕೆ ಪೂರಕವಾಗಿ ಮರಗಿಡಳನ್ನು ಬೆಳೆಸುತ್ತಾ, ಕೆರೆ-ಕಟ್ಟೆ ನಿರ್ಮಾಣ ಮಾಡಿ ಜಲ ಮರುಪೂರ್ಣ ಮಾಡಲಾಗುತ್ತಿದೆ. ಜೊತೆಗೆ ಲಕ್ಷಾಂತರ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವುದು ಮಾತ್ರವಲ್ಲದೆ ರಾಷ್ಟ್ರದ ಬೊಕ್ಕಸಕ್ಕೂ ಹೆಚ್ಚಿನ ಆದಾಯ ತರುವಲ್ಲಿ ಕಾಫಿ ಬೆಳೆಗಾರರ ಪಾತ್ರ ಪ್ರಮುಖವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2017-18ನೇ ಸಾಲಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮೊದಲ ಬಾರಿಗೆ ಭೂಮಿ ಗುತ್ತಿಗೆ ನೀಡಲು ಬಜೆಟ್‌ನಲ್ಲಿ ಅನುಮೋದನೆ ನೀಡಿತು. ನಂತರ ಬಂದ ಬಸವರಾಜು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ 25 ಎಕರೆ ವರೆಗೆ ಪ್ಲಾಂಟೇಶನ್ ಬೆಳೆಗಳ ಅನಧಿಕೃತ ಸಾಗುವಳಿ ಜಮೀನು ಗುತ್ತಿಗೆ ನೀಡಲು ಅನುಮೋದಿಸಿತ್ತು. ಈಗಿನ ಸರ್ಕಾರ ನಿಯಾಮಳಿ ರೂಪಿಸಿ ಅರ್ಜಿ ಆಹ್ವಾನಿಸಿದೆ. ಈ ಪ್ರಕಾರ 2005ರ ಪೂರ್ವದಿಂದ ಸಾಗುವಳಿ ಮಾಡಿರುವ ಕಾಫಿ ಬೆಳೆಗಾರರು ಡಿ.31 ವರಿಗೆ ಅರ್ಜಿ ಸಲ್ಲಿಸಹುದಾಗಿದೆ. ಬೆಳೆಗಾರರು ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅವಕಾಶ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಬಿ.ಕೃಷ್ಣಪ್ಪ ಅವರು ಮಾತನಾಡಿ, ರಾಜ್ಯದಲ್ಲಿ ಹೆಚ್ಚು ಕಾಫಿ ಬೆಳೆಯುವ ಚಿಕ್ಕಮಗಳೂರು, ಹಾಸನ ಹಾಗು ಕೊಡಗು ಜಿಲ್ಲೆಗಳಲ್ಲಿ ಕಾಡನೆಗಳ ಹಾವಳಿ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರತಿನಿತ್ಯ ಕಾಡಾನೆ ಹಾವಳಿಯಿಂದ ಈ ಮೂರು ಜಿಲ್ಲೆಗಳ ಕಾಫಿ ಬೆಳೆಗಾರರು ಹಾಗು ರೈತರು ಬೆಳೆ ಹಾನಿ ಹಾಗು ಪ್ರಾಣ ಭಯ ಎದುರಿಸಬೇಕಾಗಿದೆ ಎಂದು ದೂರಿದರು.
ಈಗಾಗಲೇ ಅತಿವೃಷ್ಟಿ-ಅನಾವೃಷಿ ್ಟಯಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿರುವ ರೈತರು ಕಾಡಾನೆ ಹಾವಳಿಯಿಂದ ಮತ್ತಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ದಿನನಿತ್ಯ ಗದ್ದೆ ಮತ್ತು ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕಾರ್ಮಿಕರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ಇದುವರೆಗೂ ಯಾವುದೇ ಸರ್ಕಾರಗಳು ಗಂಭೀರ ಕ್ರಮ ಕೈಗೊಂಡಿಲ್ಲ. ಬೆಳೆ ಹಾನಿಗೂ ಪರಿಹಾರ ನೀಡುವಲ್ಲೂ ವಿಳಂಬವಾಗುತ್ತಿದೆ. ಕಾಡಾನೆ ಹಾವಳಿಯಿಂದ ಬೆಳೆ ನಷ್ಟವಾದಾಗ ವೈಜ್ಞಾನಿಕವಾಗಿ ಕ್ರಮಕೈಗೊಂಡು ಶೀಘ್ರ ಪರಿಹಾರ ನೀಡಬೇಕು. ಕಾಡಾನೆ ಸಮಸ್ಯೆಪರಿಹಾರಕ್ಕೆ ಎರಡು ತಿಂಗಳಿಗೊಮ್ಮೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಅರಣ್ಯ ಇಲಾಖೆ ಜಂಟಿಯಾಗಿ ಪರಿಶೀಲನಾ ಸಭೆ ನಡೆಸಿ ಕಾಡು ಪ್ರಾಣಿಗಳ ಹಾವಳಿಯಿಂದ ಉಂಟಾದ ನಷ್ಟಕ್ಕೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಖಜಾಂಚಿ ಎಂ.ಜೆ.ಸಚಿನ್, ನಿರ್ದೇಶಕರಾದ ಎಂ.ಟಿ.ತಾರಾನಾಥ್, ಪ್ರಕಾಶ್, ಬಿ.ಜಿ.ಯತೀಶ್ ಹಾಜರಿದ್ದರು.