ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಲಿ

6blrp1
Published on

ಬೇಲೂರು: ಕಾಫಿ ಬೆಳೆಗಾರರ ವ್ಯವಹಾರ ಮತ್ತು ವಹಿವಾಟಿನ ವಿದೇಶಿ ವಿನಿಮಯದಿಂದಲೇ ಕೇಂದ್ರ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಆದಾಯ ಬರುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಆಗ್ರಹಿಸಿದರು.

ತಾಲೂಕಿನ ಕೆಸಗೂಡು ವೃತ್ತದ ಭೂಮಿಪುತ್ರ ಬೆಳೆಗಾರ ಸಂಘದ 14ನೇ ವಾರ್ಷಿಕೋತ್ಸವದ ಅಂಗವಾಗಿ ಬುಧವಾರ ಸಂಜೆ ಕೆಸಗೋಡು ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಫಿ ಬೆಳೆಗಾರರು ನಮ್ಮ ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಆದರೂ ಅವರು ಇಂದು ಸಂಕಷ್ಟದಲ್ಲಿದ್ದಾರೆ. ಕಾಫಿ ಬೆಳೆಗಾರರ ವ್ಯವಹಾರ ಮತ್ತು ವಹಿವಾಟಿನ ವಿದೇಶಿ ವಿನಿಮಯದಿಂದಲೇ ಕೇಂದ್ರ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಆದಾಯ ಬರುತ್ತಿದೆ. ಆದರೂ ಸರ್ಕಾರ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದರು.

ಅಲ್ಲದೆ ಒಂದೊಂದು ಬಾರಿ ಕಾಫಿ ಬೆಲೆಯ ಏರಿಳಿತ ಮತ್ತು ಹವಾಮಾನ ವೈಪರೀತ್ಯದಿಂದಲೂ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಜತೆಗೆ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಉಪಟಳದಿಂದಾಗಿ ಬೆಳೆಗಾರರು ಬೆಳೆದ ಬೆಳೆ ಒಂದೆಡೆ ನಾಶವಾಗುತ್ತಿದ್ದರೆ, ಮತ್ತೊಂದೆಡೆ ಕಾಫಿ ಬೆಳೆಗಾರರು ಹಾಗೂ ಕೂಲಿ ಕಾರ್ಮಿಕರು ಆನೆಗಳ ದಾಳಿಗೆ ಬಲಿಯಾಗಿದ್ದಾರೆ. ಇಷ್ಟೆಲ್ಲ ಘಟನೆಗಳು ನಡೆದರೂ ಸರ್ಕಾರಗಳು ಮಾತ್ರ ಗಮನಹರಿಸುತ್ತಿಲ್ಲ. ಆದ್ದರಿಂದ ಕಾಫಿ ಬೆಳೆಗಾರರು ನಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟಿತರಾಗಿ ಮುನ್ನಡೆದಾಗ ಮಾತ್ರ ಸರ್ಕಾರಗಳ ಕಣ್ಣು ತೆರೆಸಲು ಸಾಧ್ಯ ಎಂದರು.

ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ದೂರಿ ಕುಮಾರ್ ಮಾತನಾಡಿ, ಭೂಮಿಪುತ್ರ ಬೆಳೆಗಾರ ಸಂಘ ಬಹಳ ಸಂಘಟಿತವಾಗಿ ಕೆಲಸ ಮಾಡುತ್ತಿದೆ. ಎಲ್ಲ ಗ್ರಾಮ ಪಂಚಾಯಿತಿ ಮಟ್ಟದ ವಿವಿಧ ಬೆಳೆಗಾರ ಸಂಘಟನೆಗಳು ಸಹ ಇಲ್ಲಿನ ಬೆಳಗಾರ ಸಂಘಟನೆಯೊಂದಿಗೆ ಕೈಜೋಡಿಸಬೇಕು ಮತ್ತು ನಮ್ಮ ಮಲೆನಾಡು ಭಾಗದಲ್ಲಿನ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಬೆಳೆಗಾರರು, ರೈತರು ಮುಂದಾಗಬೇಕಿದೆ ಎಂದರು.

ಭೂಮಿಪುತ್ರ ಬೆಳೆಗಾರ ಸಂಘದ 14ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಟಿ.ರೇಣುಕಾನಂದ, ಭೂಮಿಪುತ್ರ ಕಾಫಿ ಬೆಳೆಗಾರರ ಸಂಘ ಪ್ರಾರಂಭವಾದಾಗಿನಿಂದಲೂ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದೆ. ಜತೆಗೆ ಸರ್ಕಾರಗಳ ಗಮನ ಸೆಳೆಯುವಂತಹ ಕೆಲಸಗಳನ್ನು ಎಲ್ಲರ ಸಹಕಾರದೊಂದಿಗೆ ಮಾಡಿಕೊಂಡು ಬರಲಾಗುತ್ತಿದೆ. ಈಗಿರುವ ಕಾಡಾನೆಗಳ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸುವ ನಿಟ್ಟಿನಲ್ಲಿ ಬೃಹತ್ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸುವ ಅಗತ್ಯವಿದ್ದು, ಎಲ್ಲರೂ ಸಂಘಟಿತರಾಗಿ ಮುನ್ನಡೆಯೋಣ ಎಂದರು.

ಹಾಸನದ ಎಸ್‌ಡಿಎಂ ಆಸ್ಪತ್ರೆ ಮತ್ತು ಕಾಲೇಜಿನ ಪ್ರಾಧ್ಯಾಪಕಿ ಡಾ.ಸುನೀತಾ ಆರೋಗ್ಯದ ಬಗ್ಗೆ ಕಾರ್ಯಕ್ರಮದಲ್ಲಿ ನೆರೆದಿದ್ದವರಿಗೆ ಅರಿವು ಮೂಡಿಸಿದರು.

ಭೂಮಿಪುತ್ರ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ವೇದರಾಜ, ಮಹಿಳಾ ಘಟಕದ ಅಧ್ಯಕ್ಷೆ ಯಶೋದಾ, ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೇತ್ರಾವತಿ, ಉದ್ಯಮಿ ರಾಜಶೇಖರ್, ಭೂಮಿಪುತ್ರ ಬೆಳೆಗಾರರ ಸಂಘದ ಉಪಾಧ್ಯಕ್ಷರಾದ ಎಚ್.ಡಿ.ಶಿವಾನಂದ್, ಸಿರಿಲ್ ಕ್ರಾಸ್ತ, ನಫೀಸ್ ಅಹಮದ್, ಪ್ರಧಾನ ಕಾರ್ಯದರ್ಶಿ ವೈಶಾಖ, ಸಹಕಾರ್ಯದರ್ಶಿ ಶರತ್ ಪವಾರ್, ಖಜಾಂಚಿ ನಿರಂಜನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net