ಕಾಫಿ ಬೆಳೆಗಾರರ ದಿಕ್ಕು ತಪ್ಪಿಸುವ ಯತ್ನ

7 ckm 3 h.h.devaraj
ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್
Published on

ಚಿಕ್ಕಮಗಳೂರು: ಕೇಂದ್ರ ಸರ್ಕಾರ, ಸಂಸದರು ಹಾಗೂ ಕೇಂದ್ರ ವಾಣಿಜ್ಯ ಸಚಿವರು ಇಡೀ ಕಾಫಿ ಬೆಳೆಗಾರರ ಸಮುದಾಯವನ್ನೇ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಪೆಸಿ ಕಾಯ್ದೆ ಕಾಫಿ ಬೆಳೆಗಾರರಿಗೆ ಅನ್ವಯಿಸುವುದಿಲ್ಲ ಎನ್ನುತ್ತಾರೆ. ಹೀಗೆ ಹೇಳಿದ ಮರುದಿನವೇ ಕಾಫಿ ಬೆಳೆಗಾರರಿಗೆ ಸರ್ಪೆಸಿ ಕಾಯ್ದೆಯಂತೆ ಅವರ ತೋಟ ಹರಾಜು ಮಾಡುವ ಬಗ್ಗೆ ನೋಟೀಸ್ ಬಂದಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಂಕ್ ಮುಖ್ಯಸ್ಥರು, ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ನಡೆಸಿ ಯಾವುದೇ ಬೆಳೆಗಾರರ ಆಸ್ತಿಯನ್ನು ಆರು ತಿಂಗಳ ಕಾಲ ಹರಾಜು ಮಾಡಲು ಬಿಡುವುದಿಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಿ ನಿರ್ಣಯ ಕೈಗೊಂಡಿದ್ದರು. ಆದರೆ ಇಂದು ಆ ಸಭೆಯ ನಿರ್ಣಯಕ್ಕೆ ಬೆಲೆಯೇ ಇಲ್ಲದಾಗಿದೆ ಎಂದು ದೂರಿದರು.

ಚಿಕ್ಕಮಗಳೂರಿನಲ್ಲಿ ಸಭೆ ನಡೆಸಿದ ಬಳಿಕ ಸಂಸದರು ಸಂಸತ್ತಿನಲ್ಲಿಯೂ ಈ ವಿಷಯ ಪ್ರಸ್ತಾಪ ಮಾಡಿದ್ದರು. ಆಗ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಕಾಫಿ ಸರ್ಫೆಸಿ ಕಾಯ್ದೆಯ ವ್ಯಕ್ತಿಗೆ ಬರುವುದಿಲ್ಲ ಎಂದು ಉತ್ತರವನ್ನು ನೀಡಿದ್ದರು. ಕೇಂದ್ರ ಸಚಿವರು ಹೀಗೆ ಹೇಳಿದ ಮರುದಿನವೇ ಕೆನರಾ ಬ್ಯಾಂಕ್‌ನವರು ೨೦ ಜನ ಕಾಫಿ ಬೆಳಗಾರರಿಗೆ ನೋಟಿಸ್ ನೀಡಿ ಇದೇ ತಿಂಗಳ ೧೯ರಂದು ಕಾಫಿ ತೋಟವನ್ನು ಆನ್‌ಲೈನ್ ಮೂಲಕ ಹರಾಜು ಮಾಡುವುದಾಗಿ ತಿಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕು ಹಾಗೂ ಕೇಂದ್ರ ಸರ್ಕಾರಕ್ಕೂ ಸಂಬAಧವಿಲ್ಲದAತೆ ಬ್ಯಾಂಕ್ ನವರು ವರ್ತನೆ ಮಾಡುತ್ತಿದ್ದಾರೆ. ಕೂಡಲೇ ಸಂಸದರು ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಬೇಕು. ಡಿ. ೧೯ರಂದು ನಿಗದಿಯಾಗಿರುವ ಕಾಫಿ ಬೆಳೆಗಾರರ ತೋಟವನ್ನು ಆನ್‌ಲೈನ್‌ನಲ್ಲಿ ಹರಾಜು ಮಾಡುವ ಪ್ರಕ್ರಿಯೆ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಸಭೆ ಹಾಗೂ ಸಂಸತ್ತಿನಲ್ಲಿ ಮಾತನಾಡಿರುವುದಕ್ಕೂ ಬೆಲೆ ಇಲ್ಲ ಎಂದಾಗುತ್ತದೆ ಎಂದು ಹೇಳಿದರು.

ಒಂದು ವೇಳೆ ಕಾಫಿ ತೋಟ ರಾಜು ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಾಗದೆ ಇದ್ದಲ್ಲಿ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಪಕ್ಷಾತೀತವಾಗಿ ಕಾಫಿ ಬೆಳೆಗಾರರ ಬೇಷರತ್ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಅಂದಿನ ಸಭೆಯಲ್ಲಿದ್ದ ಎಲ್ಲರೂ ಅಪಹಾಸ್ಯಕ್ಕೆ ಒಳಗಾಗಲಿದ್ದಾರೆ ಎಂದರು.

ಬ್ಯಾAಕ್‌ಗೆ ಸೂಕ್ತ ನಿರ್ದೇಶನ ನೀಡಲು ಶಕ್ತಿ ಇಲ್ಲ ಎಂದರೆ ಸಂಸದರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆನ್‌ಲೈನ್‌ನಲ್ಲಿ ತಮ್ಮ ಕಾಫಿ ತೋಟ ಹರಾಜದರೆ ಬೆಳೆಗಾರರು ಜೀವಂತ ಉಳಿಯುವುದಿಲ್ಲ ಎಂಬುದನ್ನು ಅರಿಯಬೇಕಾಗಿದೆ. ಕಾಫಿ ಕೊಯ್ಲು ಮುಗಿದಿದ್ದರೆ ಬೆಳೆಗಾರರು ಕಾಫಿಯನ್ನಾದರೂ ಮಾರಿ ಸಾಲ ಮರುಪಾವತಿ ಮಾಡುತ್ತಿದ್ದರು. ಅದಕ್ಕೂ ಅವಕಾಶವಿಲ್ಲದಂತೆ ಬ್ಯಾಂಕ್‌ನವರು ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಚ್.ಪಿ.ಮಂಜೇಗೌಡ, ಹಿರೇಮಗಳೂರು ರಾಮಚಂದ್ರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net