

ಬಾಳೆಹೊನ್ನೂರು: ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಉತ್ಕೃಷ್ಟ ದರ್ಜೆಯ ಕಾಫಿ ಬೆಳೆಯಲಾಗುತ್ತಿದೆ. ಕಾಫಿಯಲ್ಲಿರುವ ಕೆಫಿನ್ ಅಂಶ ಮಿದುಳಿನ ಕಾರ್ಯಕ್ಷಮತೆ ಹೆಚ್ಚಿಸುತ್ತದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪಟ್ಟಣದಲ್ಲಿ ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘ, ಖಾಂಡ್ಯ ಕಾಫಿ ಬೆಳೆಗಾರರ ಸಂಘ ಹಾಗೂ ಕಳಸ-ಬಾಳೂರು ಕಾಫಿ ಬೆಳೆಗಾರರ ಸಂಘದ ಸಹಯೋಗದಲ್ಲಿ ಭದ್ರಾ ಕಾಫಿ ಶಾಪ್‌ನಿಂದ ಜೇಸಿ ವೃತ್ತದವರಗೆ ಆಯೋಜಿಸಿದ್ದ ವಾಕ್ ವಿಥ್ ಕಾಫಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಲೆನಾಡಿನ ಜೀವಂತಿಕೆ ಕಾಫಿ ಬೆಳೆ ಮೇಲೆ ನಿಂತಿದೆ. ಕಾಫಿ ದರ ಕುಸಿದ ಸಂದರ್ಭದಲ್ಲಿ ಹುಟ್ಟಿಕೊಂಡ ಕಾಫಿ ಡೇ, ಕೋಥಾಸ್‌ನಂಥ ಉದ್ಯಮಗಳು ಮರು ಜೀವ ನೀಡಿವೆ. ಲಕ್ಷಾಂತರ ಕಾರ್ಮಿಕರಿಗೆ ಕಾಫಿ ಉದ್ಯಮ ಉದ್ಯೋಗ ನೀಡಿದ್ದು ಬೆಳೆದ ಬಹುಪಾಲು ಕಾಫಿ ವಿದೇಶಕ್ಕೆ ರಫ್ತಾಗುತ್ತಿದೆ ಎಂದರು.
ರೈತರ ಒತ್ತುವರಿ ತೆರವು ಮಾಡಲು ಶಾಸಕರು ಸಭೆಯಲ್ಲಿ ಸೂಚಿಸಿದ್ದಾರೆ ಎಂದು ಕೆಲವರು ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್ ಹರಿ ಬಿಟ್ಟಿದ್ದಾರೆ. ಅದರೆ ಅದು ಸತ್ಯಕ್ಕೆ ದೂರವಾದದ್ದು. ರಸ್ತೆ ವಿಸ್ತರಣೆಗೆ ಅಡ್ಡಿಯಾಗುವ ಒತ್ತುವರಿ ಕಟ್ಟಡಗಳನ್ನು ಮುಲಾಜಿಲ್ಲದೆ ತೆರವುಗೊಳಿಸುವಂತೆ ಹೇಳಿದ್ದೆ. ಅದನ್ನು ತಿರುಚಿ ಕೆಲವರು ವಾಟ್ಸ್‌ಆ್ಯಪ್‌ನಲ್ಲಿ ಹರಿಯಬಿಟ್ಟಿದ್ದು, ಅದನ್ನು ಕೇರ್ ಮಾಡಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಕಾಫಿ ಮಂಡಳಿ ಸದಸ್ಯ ಮಹಾಬಲ ಮಾತನಾಡಿ, 2030ಕ್ಕೆ ದೇಶದಲ್ಲಿ 7 ಲಕ್ಷ ಟನ್ ಕಾಫಿ ಉತ್ಪಾದನೆಯ ಗುರಿಯನ್ನು ಕಾಫಿ ಮಂಡಳಿ ಹೊಂದಿದೆ. ವಿಶ್ವದಲ್ಲಿ ಅಂತಾರಾಷ್ಟ್ರೀಯ ಕಾಫಿ ದಿನ ಆಚರಿಸಲಾಗುತ್ತಿದೆ. ಸೀಗೋಡಿನಲ್ಲಿರುವ ಕಾಫಿ ಸಂಶೋಧನಾ ಕೇಂದ್ರ ಆರಂಭಗೊಂಡು 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನ.6ರಿಂದ 8ರವರೆಗೆ ಶತಮಾನೋತ್ಸವ ಸಮಾರಂಭ ಆಚರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಹಿರಿಯ ಕ್ರೀಡಾಪಟು ಒ.ಡಿ.ಸ್ಟೀಫನ್ ಮಾತನಾಡಿ, ಕಾಫಿ ಕೇವಲ ಪೇಯವಲ್ಲ. ಅದರಲ್ಲಿ ಕಾಫಿ ಬೆಳೆಗಾರರ ಶ್ರಮ, ಸಹನೆ, ಬೆವರಿನ ಫಲ ಹಾಗೂ ಕನಸು ಅಡಗಿದೆ. 1992ರ ಬಾರ್ಸೀಲೋನಾ ಒಲಿಂಪಿಕ್ಸ್‌ನಲ್ಲಿ ಕೆಫಿನ್ ಅಂಶ ಉದ್ದೀಪನ ಪಟ್ಟಿಯಲ್ಲಿ ಸೇರಿಕೊಂಡಿತ್ತು. ನಂತರ ಅದನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದರು.
ಕಾಫಿ ತೋಟದಲ್ಲಿ ಹಲವಾರು ವರ್ಷಗಳಿಂದ ಕಾರ್ಮಿಕರಾಗಿ ಸೇವೆ ಸಲ್ಲಿಸಿದ ಸಂಜೀವ ಹಾಗೂ ನಿಂಗಯ್ಯ ಅವರನ್ನು ಗೌರವಿಸಲಾಯಿತು. ಜೇಸಿ ವೃತ್ತದ ಬಳಿ ಸಾರ್ವಜನಿಕರಿಗೆ ಉಚಿತವಾಗಿ ಕಾಫಿ ವಿತರಿಸಲಾಯಿತು.
ಮಾಜಿ ಎಂಎಲ್ಸಿ ಎಸ್.ವಿ.ಮಂಜುನಾಥ್, ಕೆ.ಎಸ್.ಜಯರಾಜ್, ಜೆ.ನಾಗಭೂಷಣ ರಾವ್, ಎಸ್.ವಿ.ಶಂಕರ್, ಬಿ.ಎಸ್.ರತ್ನಾಕರ್, ಎಂ.ಕೆ.ಸುಂದರೇಶ್, ಎಚ್.ಬಿ.ರಾಜಗೋಪಾಲ್, ರವಿಚಂದ್ರ, ಭಾಸ್ಕರ್ ವೆನಿಲ್ಲಾ, ಎ.ಜಿ.ದಿವಿನ್ ರಾಜ್, ಡಾ. ಕೃಷ್ಣಾನಂದ, ಸಿ.ಬಾಬು, ತಿಮ್ಮಯ್ಯ, ಕೆ.ಕೆ.ವೆಂಕಟೇಶ್, ಅಕ್ಷತಾ ಇತರರಿದ್ದರು.