ಕಾಫಿ ಬೆಲೆ ಕುಸಿತಕ್ಕೆ ಕಂಗಾಲು !

ಕಾಫಿ ಬೆಲೆ ಕುಸಿತಕ್ಕೆ ಕಂಗಾಲು !
Published on

ಸಕಲೇಶಪುರ: ಸಕಲೇಶಪುರ-ಆಲೂರು ವಿಧಾಸಭಾ ಕ್ಷೇತ್ರದ ಜನರ ನೋವು-ನಲಿವಿಗೆ ಸ್ಪಂದಿಸದವರೆಲ್ಲ ವಿಧಾನ ಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳಾಗುತ್ತಿರುವುದಕ್ಕೆ ಕ್ಷೇತ್ರದ ಜನ ‘ನಮ್ಮದೇನು ಅನಾಥ ಕ್ಷೇತ್ರವಾ?’ ಎಂಬ ಪ್ರಶ್ನೆ ಕೇಳಲು ಕಾರಣವಾಗಿದೆ.

‘ಸಾರ್ ನಾನು ನಿಮ್ಮ ಕ್ಷೇತ್ರದ ಎಂಎಲ್‌ಎ ಟಿಕೆಟ್ ಆಕಾಂಕ್ಷಿಯಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಅರ್ಜಿ ಸಲ್ಲಿಸಿದ್ದೇನೆ ಬಂದು ನಿಮ್ಮನ್ನು ಬೇಟಿ ಮಾಡುತ್ತೇನೆ’ಇದು ದೊಡ್ಡಬಳ್ಳಾಪುರದ ಗುತ್ತಿಗೆದಾರರೊಬ್ಬರು ಸಕಲೇಶಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾನುಬಾಳು ಭಾಸ್ಕರ್ ಅವರಿಗೆ ಕರೆಮಾಡಿ ಹೇಳಿದ ಮಾತು. ‘ಹೇಗ್ರಿ ಇಲ್ಲಿಗೆ ಬರುತ್ತೀರಾ? ಕ್ಷೇತ್ರದ ಬಗ್ಗೆ ನಿಮಗೇನು ಗೊತ್ತು’ ಎಂದು ಕೇಳಿದ್ದಕ್ಕೆ, ‘ಸಾರ್, ಚನ್ನರಾಯಪಟ್ಟಣ ತಾಲೂಕು ಸುತ್ತಮುತ್ತ ಕಾಮಗಾರಿ ನಡೆಸಿದ್ದೇನೆ’ ಎಂದಿದ್ದಾರೆ.

ಸದ್ಯ ಈ ಮಾತುಗಳು ಕ್ಷೇತ್ರದಲ್ಲಿ ವೈರಲ್ ಆಗಿದ್ದು ಆಲೂರು-ಸಕಲೇಶಪುರ ವಿಧಾನ ಸಭಾ ಕ್ಷೇತ್ರ ಏನು ದಿಕ್ಕಿಲ್ಲದವರ ಕ್ಷೇತ್ರವೇ ಎಂಬ ಪ್ರಶ್ನೆ ಮೂಡಿಸಿದೆ. ಈ ವ್ಯಕ್ತಿ ಇದುವರೆಗೆ ಕ್ಷೇತ್ರಕ್ಕೆ ಕಾಲಿಡದಿದ್ದರೂ ಟಿಕೆಟ್ ಆಕಾಂಕ್ಷಿ. ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರವಾದ ನಂತರ ಇಂತಹದೇ ಬೆಳವಣಿಗೆಗಳು ನಡೆಯುತ್ತಿವೆ. 2008 ರಲ್ಲಿ ಆಲೂರು-ಸಕಲೇಶಪುರ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ನಂತರ ಕ್ಷೇತ್ರದವರಲ್ಲದ ಎಚ್.ಕೆ. ಕುಮಾರಸ್ವಾಮಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಇದಕ್ಕೂ ಮೊದಲು ಅವರು ಮೀಸಲು ಕ್ಷೇತ್ರವಾಗಿದ್ದ ಬೇಲೂರು ಶಾಸಕರಾಗಿದ್ದರು, ಅಲ್ಲಿಗೂ ಅವರು ಹೊರಗಿನವರೇ. ಅವರ ತವರು ಹೊಳೆನರಸೀಪುರ ತಾಲೂಕು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಿಂದ ಸಹ ಹೊರಗಿನವರೇ ಅಭ್ಯರ್ಥಿಗಳಾಗುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಬಗ್ಗೆ ಎಳ್ಳಷ್ಟು ಅರಿವಿಲ್ಲದ ಹತ್ತಾರು ಆಕಾಂಕ್ಷಿಗಳು ಬಂದು ಕ್ಷೇತ್ರದಲ್ಲಿ ಸುತ್ತಾಟ ನಡೆಸುವ ಪರಿಪಾಠ ನಡೆದುಕೊಂಡು ಬರುತ್ತಿದೆ. ಕ್ಷೇತ್ರದ ಜನರ ನೋವು ನಲಿವಿನಲ್ಲಿ ಸ್ವಲ್ಪವೂ ಭಾಗಿ ಆಗದ ಈ ವ್ಯಕ್ತಿಗಳು ಅದ್ಯಾವ ಮಾನದಂಡದಲ್ಲಿ ಕ್ಷೇತ್ರದ ಟಿಕೆಟ್ ಕೇಳುತ್ತಾರೆಂಬ ಪ್ರಶ್ನೆ ಜನರದಾಗಿದೆ.

ಸದ್ಯ ಆಲೂರು-ಸಕಲೇಶಪುರ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿ ಮುರಳಿ ಮೋಹನ್, ಡಿ.ಸಿ. ಸಣ್ಣಸ್ವಾಮಿ, ಡಿ. ಮಲ್ಲೇಶ್, ಪುಷ್ಪ ಅಮರ್‌ನಾಥ್, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಭುವನಾಕ್ಷ, ಲೋಕೋಪಯೋಗಿ ಇಲಾಖೆಯಲ್ಲಿ ಸೂಪರಿಂಟೆಂಡೆಂಟ್ ಇಂಜನಿಯರ್ ಆಗಿ ನಿವೃತ್ತಿ ಹೊಂದಿರುವ ಕಟ್ಟಾಯ ಮೂಲದ ವೆಂಕಟೇಶ್ ಹಾಗೂ ದೊಡ್ಡಬಳ್ಳಾಪುರದ ಗುತ್ತಿಗೆದಾರರೊಬ್ಬರು ಸೇರಿದಂತೆ ಏಳು ಜನ ಅರ್ಜಿ ಸಲ್ಲಿಸಿದ್ದಾರೆ.

ಇದರಲ್ಲಿ ಮುರಳಿಮೋಹನ್ ಮಾತ್ರ ಕಳೆದ ಒಂದು ದಶಕದಿಂದ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಕೊರೊನಾ ಸಂಕಷ್ಟದ ಕಾಲದಲ್ಲಿ ಕ್ಷೇತ್ರದ ಜನರ ನೋವಿನಲ್ಲಿ ಭಾಗಿಯಾಗಿದ್ದಾರೆ. ಜಿಪಂ ಮಾಜಿ ಸದಸ್ಯ ಡಿ.ಸಿ. ಸಣ್ಣಸ್ವಾಮಿ 2008 ರ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಭಾವಗೊಂಡಿದ್ದರು. ನಂತರ ನಡೆದ ಎರಡು ಚುನಾವಣೆಗಳಲ್ಲಿ ಪಕ್ಷದ ಟಿಕೆಟ್ ಪಡೆಯಲು ವಿಫಲರಾಗಿದ್ದಾರೆ. ಇದರಿಂದ ಬೇಸತ್ತಿರುವ ಸಣ್ಣಸ್ವಾಮಿ ಪಕ್ಷ ಸಂಘಟಿಸಲು ನಾವು ಬೇಕು ಚುನಾವಣೆ ವೇಳೆ ಯಾರಿಗೋ ಟಿಕೆಟ್ ನೀಡುತ್ತಾರೆ ಎನ್ನುವ ಮೂಲಕ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಮುಖ್ಯಪಡಶಾಲೆಯಿಂದ ದೂರವೇ ಉಳಿದಿದ್ದಾರೆ. ಸದ್ಯ ಟಿಕೆಟ್ ಕೊಟ್ಟರೆ ನೋಡೋಣ ಎಂಬ ಮನಸ್ಥಿತಿಯಲ್ಲಿದ್ದಾರೆ.

ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪ ಅಮರ್‌ನಾಥ್‌ಗೂ ಸಕಲೇಶಪುರ ಕ್ಷೇತ್ರಕ್ಕೂ ಸಂಬಂಧವೇ ಇಲ್ಲ. ಆರು ತಿಂಗಳ ಹಿಂದೆ ಕ್ಷೇತ್ರಕ್ಕೆ ಕಾಲಿಟ್ಟು ಕ್ಷೇತ್ರದಲ್ಲಿ ಆರೋಗ್ಯ ಶಿಬಿರ, ಕ್ರಿಕೆಟ್ ಪಂದ್ಯಾವಳಿ ನಡೆಸಿ ಕಣ್ಮರೆಯಾದವರು ಇವತ್ತಿನವರಗೂ ಸುಳಿವಿಲ್ಲ. ಆದರೂ ಇವರಿಗೆ ಕ್ಷೇತ್ರದ ಶಾಸಕರಾಗುವ ಹೆಬ್ಬಯಕೆ. ಇನ್ನು ಬೇಲೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಿ. ಮಲ್ಲೇಶ್ 2013 ರ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಭಾವಗೊಂಡ ನಂತರ 2018 ರ ಚುನಾವಣೆ ವೇಳೆ ಒಮ್ಮೆ ಕಾಣಿಸಿಕೊಂಡಿದ್ದರು. ನಂತರ ದಿನಗಳಲ್ಲಿ ಇವರ ಹೆಸರು ಸಹ ಇಲ್ಲಿ ಕೇಳಿದವರಿಲ್ಲ. ಆದರೆ, ಇವರೂ ಸಹ ಕಾಂಗ್ರೆಸ್ ಟಿಕೆಟ್ ಕೋರಿ ಅರ್ಜಿ ಹಾಕಿದ್ದಾರೆ.

ಕಟ್ಟಾಯ ಮೂಲದ ವೆಂಕಟೇಶ್ ಹಾಸನದಲ್ಲಿ ಇಂಜನಿಯರ್ ವೃತ್ತಿಯಲ್ಲಿದ್ದರು. ಕಟ್ಟಾಯ ಇವರ ಗ್ರಾಮ ಎಂಬುದನ್ನು ಹೊರತುಪಡಿಸಿದರೆ ಇದುವರೆಗೆ ಕ್ಷೇತ್ರದಲ್ಲಿ ಇವರನ್ನು ಕಂಡವರಿಲ್ಲ. ಜನರ ಸಂಕಷ್ಟದಲ್ಲಿ ಭಾಗಿಯಾದ ಒಂದು ನಿದರ್ಶನವಿಲ್ಲ.
ಇನ್ನು ಭಾರತೀಯ ಜನತಾ ಪಕ್ಷದಿಂದ ಕೊರೊನಾ ದುಸ್ಥಿತಿಯ ದಿನಗಳಲ್ಲಿ ಜನರ ನೆರವಿಗೆ ನಿಂತಿದ್ದು ಸಿಮೆಂಟ್ ಮಂಜು ಮಾತ್ರ. ಬೆಂಗಳೂರು ಮೂಲದ ನಾರ್ವೆ ಸೋಮಶೇಖರ್ 2018 ರ ಚುನಾವಣೆಯಲ್ಲಿ 58 ಸಾವಿರ ಮತ ಪಡೆದು ಪರಾಭವಗೊಂಡ ನಂತರ ಕ್ಷೇತ್ರದಲ್ಲಿ ಕಾಣಿಸಿಕೊಂಡ ಉದಾಹರಣೆ ತೀರಾ ಅಪರೂಪ. ಕೊರೊನಾ ಅಂತ್ಯಗೊಳ್ಳುವ ಸಂದರ್ಭದಲ್ಲಿ ಒಮ್ಮೆ ಮಾಸ್ಕ್ ವಿತರಿಸಿದ್ದು ಹೊರತುಪಡಿಸಿ ಕ್ಷೇತ್ರದ ಜನರ ಕಷ್ಟದಲ್ಲಿ ಪಾಲ್ಗೊಂಡ ನಿದರ್ಶನ ಇಲ್ಲ. ‘ಕಳೆದ ಬಾರಿ ಅಲ್ಪ ಮತದಲ್ಲಿ ಸೋತಿದ್ದೇನೆ, ಈ ಬಾರಿ ಟಿಕೆಟ್ ನನಗೆ ನೀಡುತ್ತಾರೆ’ ಎಂಬ ದೃಢ ನಿರ್ಧಾರದಲ್ಲಿ ಬೆಂಗಳೂರಿನಲ್ಲೇ ಕುಳಿತಿದ್ದಾರೆ.

‘‘ಕ್ಷೇತ್ರದ ನಕ್ಷೆಯನ್ನೇ ನೋಡದ ಜನ ಚುನಾವಣೆ ಟಿಕೆಟ್ ಆಕಾಂಕ್ಷಿಗಳಾಗಿ ಬರುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಸ್ಥಳೀಯ ದಲಿತರಲ್ಲಿ ಒಗ್ಗಟ್ಟಿಲ್ಲದೇ ಇರುವುದು.’’ ಸಲೀಂ ಕೊಲ್ಲಹಳ್ಳಿ, ಪ್ರಧಾನ ಕಾರ್ಯದರ್ಶಿ, ಸಕಲೇಶಪುರ ಬ್ಲಾಕ್ ಕಾಂಗ್ರೆಸ್. ‘‘ಕ್ಷೇತ್ರದ ಜನ ಇರಲಿ, ಕಾರ್ಯಕರ್ತರಿಗೇ ಪರಿಚಯ ಇಲ್ಲದ ಕೆಲವರು ಚುನಾವಣೆ ವೇಳೆ ಕ್ಷೇತ್ರದಲ್ಲಿ ಬ್ಯಾನರ್ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದು ಈ ಕ್ಷೇತ್ರದ ದುರದೃಷ್ಟ.’’ ಮಂಜುನಾಥ್ ಸಂಘಿ, ಅಧ್ಯಕ್ಷ, ಸಕಲೇಶಪುರ ಬಿಜೆಪಿ ಮಂಡಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net